ತಿರುವನಂತಪುರಂ: ಕೇರಳದಲ್ಲಿ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಇವರ ಮೃತದೇಹ ಮನೆಯೊಂದರ ನೆಲದ ಅಡಿಯಲ್ಲಿ ಸಿಕ್ಕಿದೆ. ಅವರ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶವ ಸಿಕ್ಕ ಜಾಗವನ್ನು ಶ್ವಾನದಳ, ಬೆರಳಚ್ಚು ತಜ್ಞರ ತಂಡ, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಬಿಜೆಪಿ ಕಾರ್ಯಕರ್ತನ ಹೆಸರು ಬಿಂದು ಕುಮಾರ್ ಎಂದಾಗಿದ್ದು, ಸೆಪ್ಟೆಂಬರ್ 26ರಿಂದ ಕಾಣೆಯಾಗಿದ್ದರು. ಸೆ. 28 ರಂದು ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮೊದಲು ಜಾಡು ಹಿಡಿದು ಹೊರಟಿದ್ದು ಬಿಂದುಕುಮಾರ್ ಅವರ ಮೊಬೈಲ್ ಲೊಕೇಶನ್. ಅವರು ಚಂಗನಾಸ್ಸೆರಿ ಎಂಬಲ್ಲಿ ಕೊನೇ ಬಾರಿ ಮೊಬೈಲ್ ಬಳಸಿದ್ದು ಗೊತ್ತಾಯಿತು. ಆ ಸ್ಥಳಕ್ಕೆ ಹೋದ ಪೊಲೀಸರಿಗೆ ಅಲ್ಲಿನ ಕಾಲೋನಿಯಲ್ಲೇ ಬಿಂದುಕುಮಾರ್ ಬೈಕ್ ಸಿಕ್ಕಿದೆ. ಹಾಗೇ ಇದೇ ಕಾಲೋನಿಯಲ್ಲಿ ಮುತ್ತುಕುಮಾರ್ ಎಂಬುವನ ಮನೆಯಿದ್ದು, ಈತ ಬಿಂದುಕುಮಾರ್ ಗೆ ಚಿರಪರಿಚಿತ ಎನ್ನಲಾಗಿದೆ.
ಮುತ್ತುಕುಮಾರ್ ಮೇಲೆ ಅನುಮಾನ ಬಂದಿದ್ದರಿಂದ ಪೊಲೀಸರು ಅವರ ಮನೆಯನ್ನೆಲ್ಲ ಜಾಲಾಡಿದ್ದಾರೆ. ಆಗ ಮನೆಯ ಒಂದು ಭಾಗದಲ್ಲಿ ಹೊಸದಾಗಿ ಕಾಂಕ್ರೀಟ್ ಹಾಕಿದ್ದು ಕಂಡುಬಂದಿದೆ. ಅದನ್ನು ನೋಡಿದ ಪೊಲೀಸರ ಅನುಮಾನ ಮತ್ತಷ್ಟು ಜಾಸ್ತಿಯಾಗಿ, ಆ ಭಾಗವನ್ನು ಅಗೆಸಿದ್ದಾರೆ. ಸುಮಾರು ಆರು ತಾಸಿನ ಕಾರ್ಯಾಚರಣೆ ನಂತರ ಬಿಂದುಕುಮಾರ್ ಶವ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರು; ತಡೆದ ಪೊಲೀಸರ ಜತೆ ಸಂಘರ್ಷ