ನವದೆಹಲಿ: ಸಿಡಿಲು ಬಡಿದು ಸಾವು ಸಂಭವಿಸುವ ಪ್ರಕರಣಗಳ ಬಗ್ಗೆ ಪ್ರತಿ ವರ್ಷ ಹಲವಾರು ವರದಿಗಳು (Death Due to Lightning) ಪ್ರಕಟ ಆಗುತ್ತಿರುತ್ತವೆ. ಈ ರೀತಿ ಸಿಡಿಲಿನಿಂದಾಗಿಯೇ ಭಾರತದಲ್ಲಿ ವರ್ಷಕ್ಕೆ ಎರಡು ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಭೂ ವಿಜ್ಞಾನ ಸಚಿವಾಲಯವು ವಿಶೇಷವಾದ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಭೂ ವಿಜ್ಞಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ 2,862 ಮಂದಿ ಸಿಡಿಲಿನಿಂದಾಗಿ ಸಾವನ್ನಪ್ಪಿದ್ದರು. 2021ರಲ್ಲಿ ಆ ಸಂಖ್ಯೆ 2,880 ಆಗಿತ್ತು. ವರದಿಯ ಪ್ರಕಾರ ಮಧ್ಯ ಪ್ರದೇಶದಲ್ಲಿಯೇ ಅತಿ ಹೆಚ್ಚು ಮಂದಿ ಸಿಡಿಲಿನಿಂದಾಗಿ ಸಾವನ್ನಪ್ಪಿದ್ದಾರೆ. 2021ರಲ್ಲಿ ಮಧ್ಯ ಪ್ರದೇಶದಲ್ಲಿ ಒಟ್ಟಾರೆಯಾಗಿ 496 ಮಂದಿ ಸಿಡಿಲು ಬಡಿದು ಮೃತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆಘಾತಕಾರಿ ಸಂಗತಿ ಏನೆಂದರೆ, 2011ರಿಂದ 2021ರ ಅವಧಿಯಲ್ಲಿ ಕರ್ನಾಟಕದಲ್ಲಿ ಸಿಡಿಲು ಬಡಿದು 800ಕ್ಕೂ ಹೆಚ್ಚು ಜೀವ ಬಲಿಯಾಗಿದೆ.
ಇಷ್ಟಾದರೂ ಸಿಡಿಲು ಬಡಿದು ಸಾವನ್ನಪ್ಪುವುದು ಇನ್ನೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ ಅಧಿಸೂಚಿತ ವಿಪತ್ತುಗಳ ಪಟ್ಟಿಯ ಭಾಗವಾಗಿಲ್ಲ. ಹಾಗಾಗಿ ಸಿಡಿಲು ಬಡಿದು ಸಾವನ್ನಪ್ಪುತ್ತಿರುವವರ ಕುಟುಂಬಗಳಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ.
ಇದನ್ನೂ ಓದಿ: Viral Video : ತನ್ನ ಪ್ರಯಾಣಿಕರಿಗೆಂದು ವಿಶೇಷ ಆಟಗಳನ್ನು ಪರಿಚಯಿಸಿದ ಉಬರ್ ಡ್ರೈವರ್!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂ ವಿಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಗಳೊಬ್ಬರು, “ಪ್ರಸ್ತುತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ(NDRF)/ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಸಹಾಯಕ್ಕೆ ಅರ್ಹವಾದ ವಿಪತ್ತುಗಳ ಪಟ್ಟಿಯಲ್ಲಿ 12 ವಿಪತ್ತುಗಳಿವೆ. ಅವುಗಳೆಂದರೆ ಚಂಡಮಾರುತ, ಬರ, ಭೂಕಂಪ, ಬೆಂಕಿ, ಪ್ರವಾಹ, ಸುನಾಮಿ, ಆಲಿಕಲ್ಲು, ಭೂಕುಸಿತ, ಹಿಮಪಾತ, ಮೇಘಸ್ಫೋಟ, ಕೀಟಗಳ ದಾಳಿ ಮತ್ತು ಹಿಮ ಮತ್ತು ಶೀತ ಅಲೆ. ಈ ಪಟ್ಟಿಗೆ ಇನ್ನೂ ಕೆಲವು ವಿಪತ್ತುಗಳನ್ನು ಸೇರಿಸಲು 15ನೇ ಹಣಕಾಸು ಆಯೋಗ ಪರಿಗಣಿಸಿದೆ” ಎಂದು ತಿಳಿಸಿದ್ದಾರೆ.
ಹಾಗೆಯೇ, “ಭೂ ವಿಜ್ಞಾನ ಇಲಾಖೆಯು ಭಾರತದ ಹವಾಮಾನ ಇಲಾಖೆಯ ಮೂಲಕ, ಗುಡುಗು, ಮಳೆ ಮತ್ತು ಸಂಬಂಧಿತ ವಿದ್ಯಮಾನಗಳ ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ಐದು ದಿನಗಳ ಮುಂಚೆಯೇ ನೀಡುತ್ತದೆ. ಈ ವಿಚಾರದಲ್ಲಿ ಸಂತ್ರಸ್ತ ಕುಟುಂಬಗಳಿಗೆ ನೆರವು ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುತ್ತದೆ” ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಟ್ರಾಫಿಕ್ ಸಿಗ್ನಲ್ ವೇಳೆ ಬ್ಯಾಗ್‌ಗೆ ಕೈಹಾಕಿ ತಿಂಡಿ ತಿಂದ ಡೆಲಿವರಿ ಬಾಯ್; ಆರ್ಡರ್ ಮಾಡಿದವನ ಬಗ್ಗೆ ಮರುಕ
“ಐಎಂಡಿ ನೀಡುವ ಮಾಹಿತಿ ಜಿಲ್ಲೆ ಮತ್ತು ಪಟ್ಟಣದ ಮಟ್ಟದಲ್ಲಿ ನಿರ್ದಿಷ್ಟವಾಗಿರುತ್ತದೆ. ಐಎಂಡಿ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್, ಎಸ್‌ಎಂಎಸ್, ಇಮೇಲ್ ಮತ್ತು ಸ್ಥಳೀಯ ಭಾಷೆಗಳಲ್ಲಿ ವಾಟ್ಸ್‌ಆಪ್ ಸಂದೇಶಗಳ ಮೂಲಕ ಮಾಹಿತಿ ರವಾನೆ ಮಾಡುತ್ತಿದೆ. ಪ್ರಸ್ತುತ ಐಎಂಡಿಯು ದೇಶದಾದ್ಯಂತ 732 ಜಿಲ್ಲೆಗಳು ಮತ್ತು 1089 ನಗರಗಳಲ್ಲಿ ಮೂರು ಗಂಟೆಗಳಿಗೊಮ್ಮೆ ಎಚ್ಚರಿಕೆ ನೀಡುತ್ತಿದೆ. DAMINI ಮೊಬೈಲ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ತಮ್ಮ ಸುತ್ತಮುತ್ತಲಿನ(40 ಕಿಲೋಮೀಟರ್) ಸಿಡಿಲಿನ ಮಾಹಿತಿಯನ್ನು ಪಡೆದುಕೊಳ್ಳಬಹುದು” ಎಂದೂ ಅವರು ಮಾಹಿತಿ ನೀಡಿದ್ದಾರೆ.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು
- ಹೊರಗೆ ಹೋಗುವಾಗ ಹವಾಮಾನ ಮುನ್ಸೂಚನೆ ಮೆಸೇಜ್ಗಳನ್ನು ಚೆಕ್ ಮಾಡಿ.
- ಮಳೆ ಸಮಯದಲ್ಲಿ ವಿಶೇಷವಾಗಿ ಹೊಲ, ತೋಟದಲ್ಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಡಿ.
- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು.
- ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಪ್ರವಾಹ ಇಳಿದು ಬರದಂತಹ ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯಿರಿ.
- ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರಿ.
- ವಿದ್ಯುತ್ ಉಪಕರಣ, ವಿದ್ಯುತ್ ಲೈನ್ಗಳು, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಿ.
- ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.
- ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.
- ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು, ಇವು ಮಿಂಚನ್ನು ಆಕರ್ಷಿಸುತ್ತವೆ.
- ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯಿರಿ. ಲೋಹದ ವಸ್ತುಗಳನ್ನು ಬಳಸಬಾರದು. ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಿ. ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ಬಳಸಬೇಡಿ.
- ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು.
- ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರಿ.
- ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು.
- ಸಿಡಿಲಿನ ಸಂದರ್ಭದಲ್ಲಿ, ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಆಗ ಸ್ನಾನ ಮಾಡಬಾರದು, ಪಾತ್ರೆ ತೊಳೆಯಬಾರದು, ಬಟ್ಟೆ ಒಗೆಯಬಾರದು.
- ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡಿ.
- ಗುಡುಗು ಸಿಡಿಲಿನ ಸಮಯದಲ್ಲಿ ಮೋಟರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನ ಸಂಚಾರ ಬೇಡ.
- ಆಟದ ಮೈದಾನ, ಉದ್ಯಾನವನಗಳು, ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಿ. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.