ಮುಂಬೈ: ಗಾನ ಕೋಗಿಲೆ, ಸುಮಧುರ ಕಂಠದ ಮೂಲಕ ದೇಶಾದ್ಯಂತ ಮನೆಮಾತಾದ ಲತಾ ಮಂಗೇಶ್ಕರ್ (Lata Mangeshkar) ಅವರು ಅಗಲಿ ಫೆಬ್ರವರಿ ೬ಕ್ಕೆ ಒಂದು ವರ್ಷ ತುಂಬಿದ ಕಾರಣ ದೇಶಾದ್ಯಂತ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, “ಮುಂಬೈನಲ್ಲಿ ನಿರ್ಮಿಸುತ್ತಿರುವ ಕರಾವಳಿ ರಸ್ತೆಗೆ ಲತಾ ಮಂಗೇಶ್ಕರ್ ಅವರ ಹೆಸರಿಡಬೇಕು” ಎಂದು ಅವರ ಕುಟುಂಬಸ್ಥರು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಂಬೈನ ಹಾಜಿ ಅಲಿ ಚೌಕ್‌ನಲ್ಲಿ ಲತಾ ಮಂಗೇಶ್ಕರ್ ಸ್ಮರಣಾರ್ಥ ನಿರ್ಮಿಸಲಾಗುತ್ತಿರುವ ಸ್ಮಾರಕಕ್ಕೆ ಶಂಕುಸ್ಥಾಪನೆ ಬಳಿಕ ಲತಾ ಮಂಗೇಶ್ಕರ್ ಸಹೋದರಿ, ಗಾಯಕಿ ಉಷಾ ಮಂಗೇಶ್ಕರ್ ಮಾತನಾಡಿದರು. “ನನ್ನ ಅಕ್ಕನಿಗಾಗಿ ಸ್ಮಾರಕ ನಿರ್ಮಿಸುತ್ತಿರುವುದು ಸಂತಸ ತಂದಿದೆ. ಮಹಾರಾಷ್ಟ್ರ ಸರ್ಕಾರ ಹಾಗೂ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಜತೆಗೂ ಸ್ಮಾರಕ ನಿರ್ಮಿಸುತ್ತಿವೆ. ಶೀಘ್ರವೇ ಕಾಮಗಾರಿ ಮುಗಿಯಲಿದೆ” ಎಂದರು.
“ಹಾಗೆಯೇ, ಲತಾ ಮಂಗೇಶ್ವರ್ ಸ್ಮರಣಾರ್ಥ ಮುಂಬೈ ಕೋಸ್ಟಲ್ ರೋಡ್ ಪ್ರಾಜೆಕ್ಟ್ ಅನ್ವಯ ನಿರ್ಮಿಸಲಾಗುತ್ತಿರುವ ರಸ್ತೆಗೆ ಸಹೋದರಿಯ ಹೆಸರಿಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ” ಎಂದು ಹೇಳಿದರು. ಸ್ವರ ಸರಸ್ವತಿಯ ಸ್ಮರಣಾರ್ಥ ೪೦ ಅಡಿ ಎತ್ತರದ ಸ್ಮಾರಕ ನಿರ್ಮಿಸಲಾಗುತ್ತಿದ್ದು, ‘ಸ್ವರಂಚ ಕಲ್ಪವೃಕ್ಷ’ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: Lata Chowk | ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್ ಚೌಕ ಉದ್ಘಾಟನೆ, 7.9 ಕೋಟಿ ರೂ. ವೆಚ್ಚ