ನವ ದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿರುವ ವಾಸ್ತವ ಗಡಿ ನಿಯಂತ್ರಣಾ ರೇಖೆ ಬಳಿ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ನಡುವೆ ಭಾರಿ ಪ್ರಮಾಣದ ಹೊಡೆದಾಟ ನಡೆದಿದ್ದು, ಈ ಬಗ್ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಲಿದ್ದಾರೆ. ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಮಧ್ಯಾಹ್ನ 12ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ ಮಧ್ಯಾಹ್ನ 2ಗಂಟೆಗೆ ಮಾತನಾಡಿ, ಚೀನಾ-ಭಾರತ ಗಡಿ ಸಂಘರ್ಷದ ಬಗ್ಗೆ ಮಾಹಿತಿ ಕೊಡಲಿದ್ದಾರೆ.
2020ರಲ್ಲಿ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಭಾರತೀಯ ಸೇನೆ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಯೋಧರೂ ತಿರುಗೇಟು ಕೊಟ್ಟಿದ್ದರು. ಈಗ ಮತ್ತೆ ಕುತಂತ್ರಿ ಚೀನಾ ಕಾಲ್ಕೆರೆದು ಜಗಳಕ್ಕೆ ಬಂದಿದೆ. ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ, ತನ್ನ ವ್ಯಾಪ್ತಿಗೂ ಮೀರಿದ ಪ್ರದೇಶಗಳಲ್ಲಿ ಈಗಾಗಲೇ ಚೀನಾ ಹಳ್ಳಿಗಳ ನಿರ್ಮಾಣ ಮಾಡುತ್ತಿರುವುದು ವರದಿಯಾಗಿತ್ತು. ಅಲ್ಲಿ ಚೀನಾ ಸೈನಿಕರು ಭಾರತೀಯ ಯೋಧರಿಗೆ ಉಪಟಳ ಕೊಡುತ್ತಲೇ ಇದ್ದರು. ಅದು ಡಿ.9ರಂದು ತೀವ್ರ ರೂಪಕ್ಕೆ ತಿರುಗಿ ಬಡಿಗೆ-ರಾಡ್ಗಳಿಂದ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ಘರ್ಷಣೆಯಲ್ಲಿ ಎರಡೂ ಕಡೆ ಯೋಧರು ಗಾಯಗೊಂಡಿದ್ದಾರೆ. ಆದರೆ ಯಾರ ಜೀವಕ್ಕೂ ಹಾನಿಯಾಗಿಲ್ಲ ಎಂದು ಹೇಳಲಾಗಿದೆ.
ಭಾರತ-ಚೀನಾ ಗಡಿ ವಿವಾದ, ಸೈನಿಕರ ಹೊಡೆದಾಟದ ವಿಷಯವನ್ನು ತುರ್ತು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಆರ್ಜೆಡಿ ಪಕ್ಷಗಳು ನಿಲುವಳಿ ಸೂಚನೆ ನೀಡಿವೆ. ಇದು ದೇಶದ ಹಿತಾಸಕ್ತಿ ವಿಚಾರ ಆಗಿದ್ದರಿಂದ ಉಭಯ ಸದನಗಳಲ್ಲಿ ಕೂಡಲೇ ಚರ್ಚೆಯಾಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿವೆ. ಹೀಗಾಗಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.
ನಿವಾಸದಲ್ಲಿ ಸಭೆ ನಡೆಸಿದ ರಾಜನಾಥ್ ಸಿಂಗ್
ಚೀನಾ-ಭಾರತ ಗಡಿ ಸಂಘರ್ಷ ಹಿನ್ನೆಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್, ಏರ್ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಇದ್ದರು. ಭಾರತದ ಮುಂದಿನ ನಡೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: India China Clash | ಭಾರತ, ಚೀನಾ ಯೋಧರ ಮಧ್ಯೆ ಸಂಘರ್ಷ, ಕಮ್ಯುನಿಸ್ಟ್ ದೇಶದ ಸೈನಿಕರಿಗೆ ಭಾರಿ ಪೆಟ್ಟು