ನವ ದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಕೇಂದ್ರಸರ್ಕಾರಕ್ಕೆ ಒಂದು ಮನವಿ ಮಾಡಿದ್ದಾರೆ. ‘ಭಾರತದ ಕರೆನ್ಸಿ ನೋಟುಗಳ ಮೇಲೆ ಗಾಂಧಿ ಫೋಟೋದ ಜತೆ ಲಕ್ಷ್ಮೀ ದೇವಿ ಮತ್ತು ಭಗವಂತ ಗಣೇಶನ ಫೋಟೋವನ್ನೂ ಮುದ್ರಿಸಿ. ಹೀಗೆ ಮಾಡುವುದರಿಂದ, ದೇಶದ ಆರ್ಥಿಕತೆಯನ್ನು ಉತ್ತಮಪಡಿಸಲು ಶ್ರಮಿಸುತ್ತಿರುವ ಜನರು ದೇವರ ಆಶೀರ್ವಾದ ಪಡೆದಂತಾಗುತ್ತದೆ. ದೇಶದ ಆರ್ಥಿಕತೆಯೂ ಸುಧಾರಿಸುತ್ತದೆ’ ಎಂದು ಹೇಳಿದ್ದಾರೆ.
ಸದ್ಯ ಯುಎಸ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 82.38ಕ್ಕೆ ಇಳಿದಿದೆ. ಈ ಬಗ್ಗೆಯೇ ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್ ‘ರೂಪಾಯಿ ಮೌಲ್ಯ ಕಡಿಮೆಯಾಗುತ್ತಿರುವುದರಿಂದ ಭಾರತದ ಆರ್ಥಿಕತೆಯಲ್ಲಿ ಬಿಕ್ಕಟ್ಟು ಎದುರಾಗುತ್ತಿದೆ. ಆರ್ಥಿಕತೆ ಸುಧಾರಣೆ ಮಾಡಲು ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅಷ್ಟೇ ಅಲ್ಲ, ದೇಶದಲ್ಲಿ ಶಾಲೆಗಳ ನಿರ್ಮಾಣ ಹೆಚ್ಚಬೇಕು. ಆಸ್ಪತ್ರೆಗಳು, ಮೂಲಸೌಕರ್ಯಗಳು ಇನ್ನೂ ಅಭಿವೃದ್ಧಿಯಾಗಬೇಕು ಎಂದಿದ್ದಾರೆ. ಹಾಗೇ, ಕೆಲವೊಮ್ಮೆ ನಾವೆಷ್ಟೇ ಶ್ರಮ ಹಾಕಿ ಕೆಲಸ ಮಾಡಿದರೂ, ಉತ್ತಮ ಫಲಿತಾಂಶ ಬರುವುದಿಲ್ಲ. ದೇವರ ಆಶೀರ್ವಾದ ಬೇಕಾಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Rupee @81 | ಡಾಲರ್ ಎದುರು ಮೊದಲ ಬಾರಿಗೆ ರೂಪಾಯಿ 81ಕ್ಕೆ ಕುಸಿತ, ಪರಿಣಾಮವೇನು?