ನವ ದೆಹಲಿ: ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ದೆಹಲಿ ಕಾಂಗ್ರಸ್ ಉಪಾಧ್ಯಕ್ಷ ಅಲಿ ಮೆಹ್ದಿ ಮತ್ತೆ ವಾಪಸ್ ಕಾಂಗ್ರೆಸ್ ಗೇ ಬರುವುದಾಗಿ ಹೇಳಿದ್ದಾರೆ. ‘ನಾನು ರಾಹುಲ್ ಗಾಂಧಿಯವರ ಕೆಲಸಗಾರ’ ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದರು. ಕೆಲವೇ ಹೊತ್ತಲ್ಲಿ ‘ಘರ್ ವಾಪಸಿ’ ನಿರ್ಧಾರ ಪ್ರಕಟಿಸಿದ್ದಾರೆ. ಹಾಗೇ ಇವರೊಂದಿಗೆ ಆಪ್ ಸೇರ್ಪಡೆಯಾಗಿದ್ದ ಮುಸ್ತಾಫಾಬಾದ್ ಕಾಂಗ್ರೆಸ್ ಕೌನ್ಸಿಲರ್ ಸಬೀಲಾ ಬೇಗಂ ಮತ್ತು ಬ್ರಿಜ್ ಪುರ ಕೌನ್ಸಿಲರ್ ನಾಜಿಯಾ ಖಾಟೂನ್ ಕೂಡ ವಾಪಸ್ ಕಾಂಗ್ರೆಸ್ ಗೇ ಬರಲಿದ್ದಾರೆ. ಇವರೆಲ್ಲ ಇಂದು ಬೆಳಗ್ಗೆ ಮತ್ತೆ ತಮ್ಮ ಗೂಡನ್ನು ಸೇರಿಕೊಳ್ಳಲಿದ್ದಾರೆ.
ಇನ್ನು ಮೆಹ್ದಿ ಆಪ್ ಸೇರ್ಪಡೆಯಾದ ಬೆನ್ನಲ್ಲೇ ಅವರ ವಿರುದ್ಧ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಪಕ್ಷದ್ರೋಹಿ ಎಂದು ಅನೇಕರು ಅವರನ್ನು ಜರಿದಿದ್ದರು. ಭಾರತೀಯ ಯುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಉಸ್ತುವಾರಿ ಮಂಜು ಜೈನ್ ಟ್ವೀಟ್ ಮಾಡಿ, ‘ಮೆಹ್ದಿ ಒಂದು ಹಾವು’ ಎಂದಿದ್ದರು. ಇದೀಗ ಅವರು ವಾಪಸ್ ಬರುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕಾಂಗ್ರಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್ ಗೆದ್ದಿದೆ. 15 ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಹಾಕಿದೆ. 250 ಸೀಟ್ ಗಳಲ್ಲಿ 134 ವಾರ್ಡ್ ಗಳನ್ನು ಗೆದ್ದುಕೊಂಡಿದೆ. ಅದರ ಬೆನ್ನಲ್ಲೇ ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಮೆಹ್ದಿ ಆಪ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದ ಮೆಹ್ದಿ, ಡಿಸೆಂಬರ್ 3ರಂದು ರಾಹುಲ್ ಗಾಂಧಿ ಜತೆ ಭಾರತ್ ಜೋಡೋ ಯಾತ್ರೆಯಲ್ಲೂ ಪಾಲ್ಗೊಂಡಿದ್ದರು.
ಇದನ್ನೂ ಓದಿ: Delhi MCD Election | ದೆಹಲಿಯಲ್ಲಿ ಬಿಜೆಪಿ ಲೋಕಲ್ ಕೋಟೆ ಭೇದಿಸಿದ ಆಪ್, ಗೆಲುವಿಗೆ ಪ್ರಮುಖ ಕಾರಣಗಳೇನು?