ನವದೆಹಲಿ: ರಾಷ್ಟ್ರ ರಾಜಧಾನಿಯ ಬುರಾರಿ ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಇಬ್ಬರು ಶಾಸಕರು (2 AAP MLAs) ದೋಷಿ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ. ಶಾಸಕರಾದ ಅಖಿಲೇಶ್ ಪಾಟಿ ತ್ರಿಪಾಠಿ ಹಾಗೂ ಸಂಜೀವ್ ಝಾ ದೋಷಿ ಎಂದು ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ತೀರ್ಪು ನೀಡಿದ್ದಾರೆ.
೨೦೧೫ರ ಫೆಬ್ರವರಿ ೨೦ರ ರಾತ್ರಿ ಬುರಾರಿ ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಜನ ದಾಳಿ ನಡೆಸಿದ್ದರು. ಜನರಿಗೆ ಪ್ರಚೋದನೆ ನೀಡಿದ ಹಾಗೂ ದಾಳಿ ನಡೆದ ಸ್ಥಳದಲ್ಲಿ ಹಾಜರಿದ್ದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ದಾಳಿ ವೇಳೆ ಪೊಲೀಸರ ಮೇಲೆ ದಾಳಿ ಹಾಗೂ ಠಾಣೆಯ ಹಲವು ಪೀಠೋಪಕರಣಗಳು ಧ್ವಂಸಗೊಂಡಿದ್ದವು.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ೧೦ ಜನರನ್ನು ನ್ಯಾಯಾಲಯವು ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ಆಪ್ ಶಾಸಕರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗಿತ್ತು. ಈಗ ಏಳು ವರ್ಷಗಳ ಬಳಿಕ ಇಬ್ಬರು ಶಾಸಕರು ದೋಷಿಗಳು ಎಂಬುದು ಸಾಬೀತಾಗಿದೆ. ಇಬ್ಬರಿಗೂ ಶಿಕ್ಷೆಯ ಪ್ರಮಾಣ ನಿಗದಿ ಆಗಿಲ್ಲ.
ಇದನ್ನೂ ಓದಿ | ತಿಹಾರ ಜೈಲಿನ ಅತ್ಯಂತ ಹಿರಿಯ ಕೈದಿ ಎನ್ನಿಸಿಕೊಂಡ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ