ನವ ದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾನಿಗೆ ಜಾಮೀನು ನೀಡಲು ದೆಹಲಿ ಪಟಿಯಾಲಾ ಹೌಸ್ ಕೋರ್ಟ್ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಗರ್ಗ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ‘ಇದೊಂದು ಅತ್ಯಂತ ಅಸಹ್ಯಕರ ಮತ್ತು ಹೇವರಿಕೆ ಹುಟ್ಟಿಸುವ ಕೃತ್ಯವಾಗಿದೆ. ಈ ಸಮಯದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ಶಂಕರ್ ಮಿಶ್ರಾ ನವೆಂಬರ್ 26ರಂದು ಯುಎಸ್ನಿಂದ ದೆಹಲಿಗೆ ಬರುತ್ತಿದ್ದಾಗ ರಾತ್ರಿ ಸಮಯದಲ್ಲಿ ಕಂಠಪೂರ್ತಿ ಕುಡಿದು, ಅತ್ಯಂತ ಕೆಟ್ಟದಾಗಿ ವರ್ತಿಸಿದ್ದ. ಅಲ್ಲೇ ಪಕ್ಕದ ಸಾಲಿನಲ್ಲಿ ಕುಳಿತಿದ್ದ ಹಿರಿಯ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ. ಮಹಿಳೆ ಆ ವಿಷಯವನ್ನು ಪತ್ರದಲ್ಲಿ ಬರೆದು ಏರ್ ಇಂಡಿಯಾ ಅಧ್ಯಕ್ಷರಿಗೆ ದೂರು ನೀಡಿದಾಗಲೇ ವಿಷಯ ಬೆಳಕಿಗೆ ಬಂದಿತ್ತು. ಸದ್ಯ ಶಂಕರ್ ಮಿಶ್ರಾನ ಕೆಲಸ ಹೋಗಿದೆ. ಬೆಂಗಳೂರಿಗೆ ಬಂದು ಅಡಗಿ ಕುಳಿತಿದ್ದ ಅವನನ್ನು ದೆಹಲಿ ಪೊಲೀಸರು ಬಂಧಿಸಿ, ಪಟಿಯಾಲಾ ಕೋರ್ಟ್ಗೆ ಹಾಜರುಪಡಿಸಿದ್ದರು. ಶಂಕರ್ ಮಿಶ್ರಾನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ, ಕೋರ್ಟ್ ಆದೇಶ ನೀಡಿತ್ತು. ಈ ಮಧ್ಯೆ ಮಿಶ್ರಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಅದನ್ನೂ ಈಗ ನಿರಾಕರಿಸಲಾಗಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ವೇಳೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಗರ್ಗ್ ಅವರು ಶಂಕರ್ ಮಿಶ್ರಾಗೆ ಸರಿಯಾಗಿಯೇ ಛೀಮಾರಿ ಹಾಕಿದ್ದಾರೆ. ‘ಆರೋಪಿಯ ಅತಿರೇಕದ ವರ್ತನೆ ನಾಗರಿಕ ಪ್ರಜ್ಞೆಯನ್ನೇ ಬೆಚ್ಚಿಬೀಳಿಸಿದೆ. ಪ್ರತಿಯೊಬ್ಬರೂ ಇದನ್ನು ಅಸಮ್ಮತಿಸಬೇಕು. ಇಂಥ ಕೃತ್ಯ ಯಾವುದೇ ಮಹಿಳೆಯ ಘನೆಗೆ ಧಕ್ಕೆ ತಂದು, ಆಕೆಯ ಸೌಶೀಲ್ಯ ಸ್ವಭಾವವನ್ನು ಆಕ್ರೋಶಗೊಳಿಸಲು ಸಾಕು’ ಎಂದು ಕೋಮಲ್ ಗರ್ಗ್ ಹೇಳಿದ್ದಾರೆ.
ಇದನ್ನೂ ಓದಿ: Urination Case | ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದವನನ್ನು ವಜಾಗೊಳಿಸಿದ ಅಮೆರಿಕ ಕಂಪನಿ