ನವ ದೆಹಲಿ: ದೆಹಲಿ ನೂತನ ಅಬಕಾರಿ ನೀತಿಯಲ್ಲಿ ಹಗರಣ ನಡೆದ ಆರೋಪದಡಿ ತನಿಖೆ ನಡೆಸುತ್ತಿರುವ ಸಿಬಿಐ, ಅಲ್ಲಿನ ಉಪಮುಖ್ಯಮಂತ್ರಿ, ಅಬಕಾರಿ ಇಲಾಖೆ ಉಸ್ತುವಾರಿಯಾಗಿದ್ದ ಮನೀಷ್ ಸಿಸೋಡಿಯಾ ಅವರಿಗೆ ಸಮನ್ಸ್ ನೀಡಿದ್ದು, ಸೋಮವಾರ (ಅ.17) ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮನೀಷ್ ಸಿಸೋಡಿಯಾ ಅವರಿಗೆ ಸಿಬಿಐ ಸಮನ್ಸ್ ನೀಡಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಸುದ್ದಿಗೋಷ್ಠಿ ನಡೆಸಿ, ‘ನೋಡುತ್ತಿರಿ, ಸಿಸೋಡಿಯಾ ಅವರು ನಾಳೆ (ಅ.17) ಖಂಡಿತವಾಗಿಯೂ ಅರೆಸ್ಟ್ ಆಗುತ್ತಾರೆ. ಗುಜರಾತ್ ಚುನಾವಣೆ ಹತ್ತಿರ ಬರುತ್ತಿದೆ. ಅಲ್ಲಿ ಬಿಜೆಪಿಗೆ ಆಪ್ ತೀವ್ರ ಸ್ಪರ್ಧೆ ಒಡ್ಡುತ್ತಿದೆಯಲ್ಲ. ಹಾಗಾಗಿ ಬಿಜೆಪಿ ತೀವ್ರ ಭಯಗೊಂಡಿದೆ. ಹೇಗಾದರೂ ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಸಿಬಿಐನಿಂದ ಸಿಸೋಡಿಯಾ ಅವರನ್ನು ಬಂಧಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ, ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
ಇದೀಗ ಸಿಬಿಐ ಹೊಸದಾಗಿ ನೀಡಿರುವ ಸಮನ್ಸ್ಗೆ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ ಮನೀಷ್ ಸಿಸೋಡಿಯಾ ‘ಕಳೆದ ವರ್ಷ ಜಾರಿಗೊಳಿಸಲಾಗಿದ್ದ ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ, ನಾವು ಅಪಾರ ಪ್ರಮಾಣದ ಹಣ ಕಬಳಿಸಿದ್ದೇವೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಸಿಬಿಐ ದಾಳಿಯಲ್ಲಿ ಯಾವುದೇ ಸಾಕ್ಷ್ಯವೂ ಪತ್ತೆಯಾಗಿಲ್ಲ’ ಎಂದು ಹೇಳಿದ್ದಾರೆ.
‘ಸಿಬಿಐ ನನ್ನ ಮನೆಯನ್ನು 14 ತಾಸುಗಳ ಕಾಲ ರೇಡ್ ಮಾಡಿದೆ. ಆದರೆ ತನಿಖಾ ದಳಕ್ಕೆ ಏನೇನೂ ಸಿಕ್ಕಿಲ್ಲ. ನನ್ನ ಬ್ಯಾಂಕ್ ಲಾಕರ್ ಕೂಡ ಶೋಧ ಮಾಡಿದ್ದಾರೆ. ನನ್ನ ಹಳ್ಳಿಗೆ ಹೋಗಿ, ಅಲ್ಲಿಯೂ ರೇಡ್ ಮಾಡಲಾಗಿದೆ. ಆದರೆ ಎಲ್ಲಿಯೂ ಯಾವುದೇ ಹಣವಾಗಲಿ, ಅಕ್ರಮ ನಡೆದಿದ್ದಕ್ಕೆ ಸಾಕ್ಷಿಯಾಗಲೀ ತನಿಖಾದಳಗಳಿಗೆ ಲಭ್ಯವಾಗಿಲ್ಲ. ಈಗ ಎಲ್ಲ ಮುಗಿದ ಮೇಲೆ ಮತ್ತೊಮ್ಮೆ ಸಮನ್ಸ್ ಕೊಟ್ಟಿದ್ದಾರೆ. ಅ.17ರಂದು ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಹೋಗುತ್ತೇನೆ. ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ’ ಎಂದು ಸಿಸೋಡಿಯಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ನೂತನ ಅಬಕಾರಿ ಯೋಜನೆಯಡಿ ಮದ್ಯದ ಚಿಲ್ಲರೆ ವ್ಯಾಪಾರಿಗಳಿಗೆ ಲೈಸೆನ್ಸ್ ನೀಡುವಾಗ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಅನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ಅದರಲ್ಲಿ ಮನೀಷ್ ಸಿಸೋಡಿಯಾ ಅವರೇ ನಂಬರ್ 1 ಆರೋಪಿ ಎಂದೂ ಸಿಬಿಐ ತನ್ನ ಎಫ್ಐಆರ್ನಲ್ಲಿ ಉಲ್ಲೇಖಿಸಿದೆ. ಈ ಕೇಸ್ನಡಿ ಇತ್ತೀಚೆಗೆ ಆಪ್ನ ಸಂವಹನ ವಿಭಾಗದ ಮುಖ್ಯಸ್ಥ ಮತ್ತು ಸಿಸೋಡಿಯಾ ಅವರ ಆಪ್ತ ವಿಜಯ್ ನಾಯರ್ ಎಂಬುವರನ್ನು ಸಿಬಿಐ ಬಂಧಿಸಿದೆ. ಹಾಗೇ, ಅಭಿಷೇಕ್ ಬೋನಪಲ್ಲಿ ಎಂಬಾತ ದಕ್ಷಿಣ ಭಾರತ ಮೂಲದ ಕೆಲವು ಉದ್ಯಮಿಗಳನ್ನು ಶಾಮೀಲು ಮಾಡಿಕೊಂಡು ಲಾಬಿ ಮಾಡುತ್ತಿದ್ದಾನೆ ಎಂಬ ಆರೋಪದಡಿ ಆತನನ್ನೂ ಬಂಧಿಸಲಾಗಿದೆ. ಹಾಗೇ ಅನೇಕ ಜನರನ್ನು ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್ ಆಫರ್, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್ ಸಿಸೋಡಿಯಾ ಆರೋಪ