Site icon Vistara News

ದೆಹಲಿ ಅಗ್ನಿ ಅವಘಡ; ಪರಾರಿ ಆಗಿದ್ದ ಕಟ್ಟಡ ಮಾಲೀಕನನ್ನು ಬಂಧಿಸಿದ ಪೊಲೀಸ್‌

Delhi Fire Accident

ನವದೆಹಲಿ: ದೆಹಲಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕಟ್ಟಡದ ಮಾಲೀಕ ಮನೀಶ್‌ ಲಾಕ್ರಾನನ್ನು ಬಂಧಿಸಿದ್ದಾರೆ. ಶುಕ್ರವಾರ ಪಶ್ಚಿಮ ದೆಹಲಿಯ ಮುಂಡ್ಕಾದಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಬಿದ್ದು 27 ಮಂದಿ ಮೃತಪಟ್ಟಿದ್ದರು. ಗಾಯಗೊಂಡವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಟ್ಟಡದಲ್ಲಿ ಯಾವುದೇ ಅಗ್ನಿ ಸುರಕ್ಷತಾ ನಿಯಮಗಳು ಪಾಲನೆಯಾಗಿಲ್ಲ. ಇದರ ಮಾಲೀಕರು ಅಗ್ನಿ ಶಾಮಕ ದಳದಿಂದ ನಿರಾಕ್ಷೇಪಣಾ ಪತ್ರವನ್ನು ಹೊಂದಿರಲಿಲ್ಲ ಎಂದು ಈಗಾಗಲೇ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ದಿನದಂದು ಉಳಿದಿಬ್ಬರು ಮಾಲೀಕರಾದ ಹರೀಶ್‌ ಗೋಯೆಲ್‌ ಮತ್ತು ವರುಣ್‌ ಗೋಯೆಲ್‌ ಅರೆಸ್ಟ್‌ ಆಗಿದ್ದರು. ಆದರೆ ಮುಖ್ಯ ಆರೋಪಿಯಾದ ಮನೀಶ್‌ ನಾಪತ್ತೆಯಾಗಿದ್ದ. ಈತನ ಪತ್ತೆಗಾಗಿ ಪೊಲೀಸರು ದೆಹಲಿ ಮತ್ತು ಹರ್ಯಾಣದ ಹಲವು ಭಾಗಗಳಲ್ಲಿ ಹುಡುಕಾಟ ನಡೆಸಿದ್ದರು. ಮನೀಶ್‌ ಕುಟುಂಬದ ಇನ್ನಿತರ ಸದಸ್ಯರು ಇನ್ನೂ ಪತ್ತೆಯಾಗಿಲ್ಲ.

ಮನೀಶ್‌ ಲಾಕ್ರಾನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆತ ಹೇಳುವ ಪ್ರಕಾರ ಈ ಕಟ್ಟಡ ಅವರ ತಂದೆಗೆ ಸೇರಿದ್ದು. 2015ರಲ್ಲಿ ಅವರು ತೀರಿಕೊಂಡರು. ಬಳಿಕ 2016ರಲ್ಲಿ ಕಟ್ಟಡವನ್ನು ಮನೀಶ್‌ ತನ್ನ ಹೆಸರಿಗೆ ಮಾಡಿಸಿಕೊಂಡ. ನಂತರ ಕಟ್ಟಡದ ಕೊನೇ ಫ್ಲೋರ್‌ನಲ್ಲಿ ಎರಡು ಕೋಣೆ, ಒಂದು ಅಡುಗೆ ಮನೆ ಮತ್ತು ಒಂದು ಬಾತ್‌ ರೂಂ ನಿರ್ಮಿಸಿದ್ದಾಗಿ ಮಾಹಿತಿ ನೀಡಿದ್ದಾನೆ. ಇದೇ ಕಟ್ಟಡದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದ ವರುಣ್‌ ಗೋಯೆಲ್‌ ಮತ್ತು ಹರೀಶ್‌ ಗೋಯೆಲ್‌ ಕೂಡ ಬಳಿಕ ಕಟ್ಟಡದ ಮಾಲೀಕತ್ವದಲ್ಲಿ ಪಾಲು ಪಡೆದರು ಎಂದು ಪೊಲೀಸ್‌ ಉಪ ಆಯುಕ್ತ ಸಮೀರ್‌ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ | ದೆಹಲಿ ಅಗ್ನಿ ದುರಂತ: ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಿಸಿದ ಕೇಜ್ರಿವಾಲ್‌

ಈ ಮೂವರೂ ಮಾಲೀಕರು ಕಟ್ಟಡಕ್ಕೆ ಸಂಬಂಧಪಟ್ಟು ಯಾವುದೇ ಮಾನ್ಯ ದಾಖಲೆಯನ್ನೂ ಹೊಂದಿರಲಿಲ್ಲ. ಪೊಲೀಸರಿಂದ ಪರವಾನಗಿ ಪಡೆದಿರಲಿಲ್ಲ. ಫೈರ್‌ ಸರ್ವೀಸ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ)ಯನ್ನು ತೆಗೆದುಕೊಂಡಿರಲಿಲ್ಲ. ಇದೇನೂ ಇಲ್ಲದೆ ಇಷ್ಟು ವರ್ಷ ಆ ಕಟ್ಟಡದಲ್ಲಿ ಕಂಪನಿ ನಡೆಸಿದ ಬಗ್ಗೆ ನಮಗೇ ಅಚ್ಚರಿಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಟ್ಟಡಕ್ಕೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದೇವೆ ಮತ್ತು ನಮ್ಮ ವಾರ್ಷಿಕ ವಹಿವಾಟು 50-60 ಕೋಟಿ ರೂಪಾಯಿ. ಕಟ್ಟಡದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ದ್ವಾರಗಳಿದ್ದರೂ ಕೂಡ ಸಾಮಾನ್ಯವಾಗಿ ಆ ಭಾಗದಲ್ಲಿ ಸಾಗಣೆಗೆ ಸಿದ್ಧವಾದ ಸರಕುಗಳೇ ಇರುತ್ತವೆ ಎಂದು ಮಾಲೀಕರು ಪೊಲೀಸರಿಗೆ ಹೇಳಿದ್ದಾರೆ.

ಇದನ್ನೂ ಓದಿ | ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ

Exit mobile version