ದೆಹಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದರು. ಘಟನೆಯನ್ನು ಮ್ಯಾಜಿಸ್ಟರಿಯಲ್ ತನಿಖೆಗೆ ಆದೇಶಿಸಿದ ಸಿಎಂ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ದೆಹಲಿಯ ಮುಂಡ್ಕಾದಲ್ಲಿ ಮೃತಪಟ್ಟವರ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅವರ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿಎನ್‌ಎ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್, ಇಂದು ಬಹುಮಹಡಿ ಕಟ್ಟಡದಲ್ಲಿ ನಡೆದ ಅಗ್ನಿ ದುರಂತವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದೇನೆ. ಆರೋಪಿಗಳು ಯಾರೇ ಆದರೂ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ. ಮೃತರ ಕುಟುಂಬಗಳಿಗೆ 10 ಲಕ್ಷ ರೂ ನೀಡಲಾಗುವುದು. ಗಾಯಾಳುಗಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ಅರವಿಂದ್ ಕೇಜ್ರಿವಾಲ್‌ರೊಟ್ಟಿಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೈಗಾರಿಕಾ ಮತ್ತು ಕಾರ್ಮಿಕ ಸಚಿವ ಸತ್ಯೇಂದ್ರ ಜೈನ್, ಪಶ್ಚಿಮ ದೆಹಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕೃತಿ ಗಾರ್ಗ್ ಇತರರು ಇದ್ದರು.
ಇದನ್ನೂ ಓದಿ | fire tragedy: ಸುರಕ್ಷತಾ ನಿಯಮ ನಿರ್ಲಕ್ಷ್ಯಕ್ಕೆ ತೆರಬೇಕಾಗುತ್ತದೆ ಬೆಂಕಿಯ ಬೆಲೆ
ಕೈಗಾರಿಕಾ ಮತ್ತು ಕಾರ್ಮಿಕ ಸಚಿವ ಸತ್ಯೇಂದ್ರ ಜೈನ್ ಅವರು ನಿನ್ನೆ ರಾತ್ರಿಯೂ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಹುಮಹಡಿ ಕಟ್ಟಡದಲ್ಲಿ ಯಾವ ವ್ಯವಸ್ಥೆಯೂ ಸರಿಯಾಗಿ ಇಲ್ಲ. ಒಂದು ಕಡೆ ಮಾತ್ರ ಮೆಟ್ಟಿಲುಗಳಿವೆ. ಅದು ಬಿಟ್ಟರೆ ಜನರು ಹೊರಬೀಳಲು ಇನ್ನೆಲ್ಲೂ ಮಾರ್ಗವಿಲ್ಲ. ತುರ್ತು ನಿರ್ಗಮನ ದ್ವಾರವೂ ಇಲ್ಲ ಎಂದು ಹೇಳಿದ್ದರು.
ಶುಕ್ರವಾರ ಸಂಜೆ ದೆಹಲಿಯ ಮುಂಡ್ಕಾ ಮೆಟ್ರೋ ಸ್ಟೇಶನ್ ಬಳಿ ಇರುವ ನಾಲ್ಕಂತಸ್ತಿನ ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ ನಡೆದಿದೆ. ಇದರಲ್ಲಿ 27ಮಂದಿ ಮೃತಪಟ್ಟಿದ್ದಾರೆ. ಈಗಿನ ಮಾಹಿತಿಯ ಪ್ರಕಾರ 50 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 29 ಮಂದಿ ನಾಪತ್ತೆಯಾಗಿದ್ದಾರೆ. ಗಾಯಗೊಂಡಿರುವ 12 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಒಂದು ಸಿಸಿಟಿವಿ ಕ್ಯಾಮರಾ ತಯಾರಿಕಾ ಕಾರ್ಖಾನೆಯಿತ್ತು. ಅದರ ಪ್ಯಾಕಿಂಗ್‌ಗಾಗಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್‌ಗಳಿಂದಲೇ ಬೆಂಕಿ ತೀವ್ರತೆ ಹೆಚ್ಚಾಗಿತ್ತು ಎಂದು ಹೇಳಲಾಗಿದೆ. ಅದಕ್ಕೂ ಮಿಗಿಲಾಗಿ ಈ ಕಟ್ಟಡ ಅಗ್ನಿ ಶಾಮಕ ದಳದಿಂದ ನಿರಾಕ್ಷೇಪಣಾ (ಎನ್‌ಒಸಿ) ಪತ್ರ ಪಡೆದಿರಲಿಲ್ಲ ಎಂದು ಫೈರ್ ಸರ್ವೀಸ್ ಮುಖ್ಯಸ್ಥ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಇದನ್ನೂ ಓದಿ | ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ