ದೆಹಲಿಯಲ್ಲಿ ಯಮುನೆ ಮುನಿಸಿಕೊಂಡು (Yamuna River Flood), ಊರ ಬಾಗಿಲಿಗೆ ಬಂದಿದ್ದಾಳೆ. ಎಲ್ಲೆಲ್ಲೂ ಯಮುನಾ ನದಿ ನೀರಿನ ಪ್ರವಾಹ. ದೆಹಲಿಯ ಪ್ರವಾಹ (Delhi Flood) ಪರಿಸ್ಥಿತಿ ನಿಭಾಯಿಸಲು ಅಲ್ಲಿನ ಆಡಳಿತಕ್ಕೆ ಭಾರತೀಯ ಸೇನೆ ಸಹಾಯ ಮಾಡುತ್ತಿದೆ. ಅಪಾಯದ ಸ್ಥಳದಿಂದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ನುಗ್ಗುತ್ತಿರುವ ನೀರನ್ನು ನಿಯಂತ್ರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಜನಪ್ರತಿನಿಧಿಗಳು ರಸ್ತೆಗೆ ಇಳಿದು, ಮಳೆ-ಪ್ರವಾಹದ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಜತೆಗೆ ಯಮುನಾ ನದಿ (Yamuna River) ಪ್ರವಾಹಕ್ಕೆ ರಾಜಕೀಯ ಲೇಪನವನ್ನೂ ಬಳಿಯಲಾಗುತ್ತಿದೆ.
ಈ ಸಲ ದೆಹಲಿಯಲ್ಲಿ ಬಿದ್ದ ವಿಪರೀತ ಮಳೆಗೆ ಸಂಪೂರ್ಣ ಅವ್ಯವಸ್ಥೆ ಉಂಟಾಗಿ, ಯಮುನಾ ನದಿ ಅಪಾಯದ ಮಟ್ಟವನ್ನೂ ಮೀರಿ ಹರಿದಿದೆ. ಗರಿಷ್ಠ 208.66 ಮೀಟರ್ಗೆ ಇದರ ಹರಿವಿನ ಮಟ್ಟ ಹೋಗಿತ್ತು. ಹೀಗಾಗಿ ನೀನು ನಗರದೊಳಗೆ ನುಗ್ಗಿತ್ತು. ಆದರೆ ಇದು ಬಿಜೆಪಿ ಪಿತೂರಿ ಎಂದು ಆಮ್ ಆದ್ಮಿ ಪಕ್ಷ (AAP) ಈಗ ಆರೋಪ ಮಾಡುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಕೃಷಿ ಮತ್ತು ಆಹಾರ ನಿಯಂತ್ರಣ ಸಚಿವ ಸೌರಭ್ ಭಾರದ್ವಾಜ್ ‘ದೆಹಲಿ ನಗರವನ್ನು ಮುಳುಗಿಸಲು ಬಿಜೆಪಿ ಪಿತೂರಿ ಮಾಡಿದೆ ಎಂದಿದ್ದಾರೆ.
‘ಹರ್ಯಾಣದ ಯಮುನಾ ನಗರ ಜಿಲ್ಲೆಯಲ್ಲಿ ಯಮುನಾ ನದಿಗೆ ಕಟ್ಟಲಾದ ಹತ್ನಿಕುಂಡ್ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ರಾಷ್ಟ್ರರಾಜಧಾನಿಯೆಡೆಗೆ ಬಿಡಲಾಗಿದೆ. ಇದನ್ನು ಕೇಂದ್ರ ಬಿಜೆಪಿ ಸರ್ಕಾರ, ಹರ್ಯಾಣ ಸರ್ಕಾರದ ಮೂಲಕ ಮಾಡಿಸಿದೆ. ಹೀಗೆ ಅಗತ್ಯಕ್ಕಿಂತಲೂ ಹೆಚ್ಚಿನ ನೀರನ್ನು ದೆಹಲಿಯ ಕಡೆಗೆ ಹರಿಸುವ ಮೂಲಕ, ನಗರವನ್ನು ಮುಳುಗಿಸುವ ಸಂಚು ನಡೆದಿದೆ’ ಎಂದು ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಇದನ್ನೂ ಓದಿ: Rain News: ದೆಹಲಿಯಲ್ಲಿ ಯಮುನೆ ಅಬ್ಬರ; ಕೇಜ್ರಿವಾಲ್ ನಿವಾಸದ ಬಳಿಯೇ ಪ್ರವಾಹ, ನೀರು ನುಗ್ಗುವ ಸಾಧ್ಯತೆ
‘ಹತ್ನಿಕುಂಡ್ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಕೇವಲ ದೆಹಲಿಯ ಕಡೆಗೆ ಮಾತ್ರ ಬಿಡಲಾಗುತ್ತಿದೆ. ಅದನ್ನು ಹರ್ಯಾಣದ ಪಶ್ಚಿಬ ಕಾಲುವೆಗಾಗಲೀ, ಉತ್ತರ ಪ್ರದೇಶದಲ್ಲಿರುವ ಪೂರ್ವ ಕಾಲುವೆಗಾಗಲೀ ಬಿಡುತ್ತಿಲ್ಲ. ಯಮುನಾ ನದಿಯ ನೀರನ್ನು ದೆಹಲಿಗೆ ಬಿಡುವ ಮೂಲಕ ಇಲ್ಲಿನ ಸುಪ್ರೀಂಕೋರ್ಟ್ ಸೇರಿ, ಪ್ರಮುಖ ಸಂಸ್ಥೆಗಳನ್ನು ನೀರಿನಲ್ಲಿ ಮುಳುಗಿಸುವ ಪಿತೂರಿಯನ್ನು ಬಿಜೆಪಿ ಮಾಡುತ್ತಿದೆ’ ಎಂದು ಆಮ್ ಆದ್ಮಿ ಪಕ್ಷದ ಸಚಿವರ ಆರೋಪವಾಗಿದೆ. ಆಪ್ ನಾಯಕ ಸೋಮನಾಥ್ ಭಾರ್ತಿ, ದೆಹಲಿ ಲೋಕೋಪಯೋಗಿ ಇಲಾಖೆ ಸಚಿವೆ ಅತಿಶಿ ಕೂಡ ಇದನ್ನೇ ಹೇಳಿದ್ದಾರೆ.
ತಿರುಗೇಟು ಕೊಟ್ಟ ಬಿಜೆಪಿ
ಆಮ್ ಆದ್ಮಿ ಪಕ್ಷದ ಆರೋಪಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವಾ ಅವರು ಕಟುವಾಗಿ ಪ್ರತಿಕ್ರಿಯೆ ನೀಡಿ ‘ದೆಹಲಿಯಲ್ಲಿ ಕೊರೊನಾ ಸಾಂಕ್ರಾಮಿಕ ಹೆಚ್ಚಾದಾಗಲೂ ದೆಹಲಿ ಸರ್ಕಾರ ಇತರ ರಾಜ್ಯಗಳನ್ನು ದೂಷಿಸಿತ್ತು. ಈಗಲೂ ಕೂಡ ಅದನ್ನೇ ಮಾಡುತ್ತ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಆಡಳಿತ ವಿಫಲತೆಯನ್ನು ಮರೆಮಾಚುತ್ತಿದೆ’ ಎಂದು ಹೇಳಿದ್ದಾರೆ. ಹರ್ಯಾಣ ಕೃಷಿ ಸಚಿವ ಜೈ ಪ್ರಕಾಶ್ ದಲಾಲ್ ಅವರೂ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ಹತ್ನಿಕುಂಡ್ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಾಗ ಅದು ಮೊದಲು ದೆಹಲಿ, ಆಗ್ರಾ, ಅಲಹಾಬಾದ್ ಮೂಲಕ ಹಾದುಹೋಗಿ, ಸಮುದ್ರಕ್ಕೆ ಸೇರುತ್ತದೆ. ಇದರಲ್ಲಿ ಪಿತೂರಿ ಏನು ಬಂತೆಂದು ಪ್ರಶ್ನಿಸಿದ್ದಾರೆ.