Site icon Vistara News

Delhi Flood: ಸುಪ್ರೀಂಕೋರ್ಟ್​ವರೆಗೂ ಹರಿದು ಬಂದ ಯಮುನೆ; ಕುಡಿಯುವ ನೀರಿನ ಕೊರತೆ!

Delhi Flood

ದೆಹಲಿಯಲ್ಲಿ ವಿಪರೀತ ಮಳೆ (Delhi Rain)ಯಾಗುತ್ತಿದೆ. ಯಮುನಾ ನದಿಯಂತೂ (Yamuna River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುರುವಾರ ನದಿಯಲ್ಲಿ ನೀರಿನ ಪ್ರಮಾಣ 208.46 ಮೀಟರ್​ಗೆ ಏರಿತ್ತು. ಅದು ಇಂದು ಬೆಳಗ್ಗೆ ಕಡಿಮೆಯಾಗಿದೆ. ಆದರೂ ಅಪಾಯದ ಮಟ್ಟವಾದ 205.33 ಮೀಟರ್​​ಗಿಂತಲೂ ಜಾಸ್ತಿ ಹರಿಯುತ್ತಿದೆ. ನದಿ ತೀರದಿಂದ ಸುಮಾರು 23,692 ಜನರನ್ನು ಸ್ಥಳಾಂತರ ಮಾಡಲಾಗಿದೆ. ದೆಹಲಿಯ ರಸ್ತೆಗಳೆಲ್ಲ ನದಿಗಳಾಗಿ ಮಾರ್ಪಟ್ಟಿವೆ. ಎಲ್ಲ ಮನೆಗಳು, ವೈದ್ಯಕೀಯ ಕೇಂದ್ರಗಳು, ಆಶ್ರಯ ಮನೆಗಳು, ಸ್ಮಶಾನಗಳಿಗೆಲ್ಲ ನೀರು ನುಗ್ಗಿದೆ (Delhi Flood).

ಮನೆಮನೆಗೆ ನುಗ್ಗುತ್ತಿರುವ ದೆಹಲಿಯ ಯಮುನೆಯ ಅಬ್ಬರ ಇಂದು ಕೂಡ ಮುಂದುವರಿದಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮತ್ತು ಇತರ ಸಚಿವರ ನಿವಾಸಗಳ ಬಳಿಯೂ ಪ್ರವಾಹ ಉಂಟಾಗಿದೆ. ಇಂದು ರಾಜ್​ಘಾಟ್​ನಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಜನರಂತೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಗುರುವಾರ ರಾತ್ರಿಯಂತೂ ಯಮುನಾ ನದಿ ಪ್ರವಾಹ ಸುಪ್ರೀಂಕೋರ್ಟ್​ವರೆಗೆ ಹೋಗಿತ್ತು. ಚರಂಡಿಗಳಿಂದ ನೀರು ಹಿಮ್ಮುಖವಾಗಿ ಹರಿದಿದೆ. ಸುಪ್ರಿಂಕೋರ್ಟ್​​ ಸಮೀಪದ ಮಥುರಾ ಮತ್ತು ಭಗವಾನ್ ದಾಸ್​ ರಸ್ತೆಗಳೆಲ್ಲ ಜಲಾವೃತಗೊಂಡಿವೆ.

ದೆಹಲಿಯಲ್ಲಿ ಅಬ್ಬರದ ಮಳೆಯಾಗುತ್ತಿದೆ. ಎಲ್ಲೆಲ್ಲೂ ಪ್ರವಾಹ. ಈ ಮಧ್ಯೆ ದೆಹಲಿಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಯಮುನಾ ನದಿ ನೀರಿನ ಮಟ್ಟ ಮಿತಿಮೀರಿದ್ದರಿಂದ ವಾಜಿರಾಬಾದ್, ಚಂದ್ರವಾಲ್ ಮತ್ತು ಓಖ್ಲಾ ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದೆ. ಹೀಗಾಗಿ ಶೇ.25ರಷ್ಟು ಪೂರೈಕೆ ಕಡಿತಗೊಳಿಸಲು ದೆಹಲಿ ಸರ್ಕಾರವೇ ನಿರ್ಧಾರ ಮಾಡಿದೆ. ದೆಹಲಿಯಲ್ಲಿ ಜುಲೈ 16ರವರೆಗೂ ಎಲ್ಲ ಶಾಲಾ-ಕಾಲೇಜುಗಳಿಗೂ ರಜಾ ನೀಡಲಾಗಿದೆ. ಅಗತ್ಯ ವಸ್ತುಗಳಲ್ಲದ, ಸರಕುಗಳನ್ನು ಹೊತ್ತು ಬರುವ ಲಾರಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

Exit mobile version