ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕು ಎಂದು ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇಂದು ವಿಭಜಿತ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ.
ಪತ್ನಿಗೆ ಇಷ್ಟವಿಲ್ಲದೆ ಇದ್ದರೂ ಪತಿ ಬಲವಂತದಿಂದ ಲೈಂಗಿಕ ಸಂಪರ್ಕ ನಡೆಸುವುದು ಅತ್ಯಾಚಾರಕ್ಕೆ ಸಮ ಎಂದು ಪರಿಗಣಿಸಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿತ್ತು. ಇದರ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ದೆಹಲಿ ಹೈಕೋರ್ಟ್‌ನಲ್ಲಿ ದಾವೆಗಳು ಸಲ್ಲಿಕೆಯಾಗಿದ್ದವು.
ಇಬ್ಬರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಈ ದಾವೆಗಳ ವಿಚಾರಣೆ ನಡೆಸಿ ಬುಧವಾರ ತೀರ್ಪು ನೀಡಿದೆ. ಆದರೆ, ಇಬ್ಬರು ನ್ಯಾಯಮೂರ್ತಿಗಳು ಪರಸ್ಪರ ಭಿನ್ನವಾದ ತೀರ್ಪು ನೀಡಿದ್ದಾರೆ. ನ್ಯಾ. ರಾಜೀವ್ ಶಕ್ದರ್ ಮತ್ತು ನ್ಯಾ. ಹರಿಶಂಕರ್ ವಿಭಿನ್ನವಾದ ನಿಲುವು ಪ್ರಕಟಿಸಿದ್ದಾರೆ. ಇವರಲ್ಲಿ ನ್ಯಾ. ರಾಜೀವ್ ಶಕ್ದರ್ ಅವರು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸುವ ಪರವಾಗಿ ತೀರ್ಪು ಕೊಟ್ಟಿದ್ದರೆ, ನ್ಯಾ. ಹರಿಶಂಕರ್ ಅದಕ್ಕೆ ಅಸಮ್ಮತಿ ಸೂಚಿಸಿದ್ದಾರೆ.
ಪತ್ನಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದುವ ಪತಿಯನ್ನು ಕ್ರಿಮಿನಲ್ ಕೇಸ್‌ನಿಂದ ವಿನಾಯಿತಿ ನೀಡುವ ಐಪಿಸಿ ಸೆಕ್ಷನ್ 375 (ಅತ್ಯಾಚಾರ)ನ್ನು ನಾನು ಒಪ್ಪುವುದಿಲ್ಲ ಎಂದು ನ್ಯಾ. ರಾಜೀವ್ ಶಕ್ದರ್ ಹೇಳಿದ್ದಾರೆ.
ಆದರೆ ಸೆಕ್ಷನ್ 375(ಅತ್ಯಾಚಾರ) ನಿಯಮಗಳು ಕೇವಲ ಅಪ್ರಾಪ್ತ ಪತ್ನಿಗೆ ಮಾತ್ರ ಅನ್ವಯವಾಗುತ್ತವೆ. ಪ್ರಾಪ್ತ ವಯಸ್ಸಿಗೆ ಬಂದ ಯುವತಿಯನ್ನು ಮದುವೆಯಾಗಿದ್ದು, ಅವಳೊಂದಿಗೆ ನಡೆಸುವ ಯಾವುದೇ ಲೈಂಗಿಕ ಪ್ರಕ್ರಿಯೆಗಳು ಅಪರಾಧವೆಂದು ಪರಿಗಣಿತವಾಗುವುದಿಲ್ಲ ಎಂದು ನ್ಯಾ. ಹರಿಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ | ಶಬ್ದ ಮಾಲಿನ್ಯ ನಿಯಂತ್ರಣ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಕ್ರಮ: ಆರಗ ಜ್ಞಾನೇಂದ್ರ
ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕು ಎಂದು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಈಗಲ್ಲ. 2015ರಿಂದಲೇ ಸಲ್ಲಿಕೆಯಾದ ಅರ್ಜಿಗಳು ಬಾಕಿ ಇವೆ. ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ದೆಹಲಿ ಹೈಕೋರ್ಟ್, ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಸಂಬಂಧ ನಿಮ್ಮ ನಿಲುವೇನು ಎಂಬುದನ್ನು ಎರಡು ವಾರಗಳ ಒಳಗೆ ಹೇಳುವಂತೆ 2022ರ ಫೆಬ್ರವರಿ 27ರಂದು ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಆದರೆ ಕೇಂದ್ರ ಸರ್ಕಾರ ಅಷ್ಟು ಕಡಿಮೆ ಅವಧಿಯಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಸಮಯ ಬೇಕು ಎಂದು ಕೇಳಿತ್ತು. ಆದರೆ ಹೆಚ್ಚಿನ ಅವಧಿ ಕೊಡಲು ಸಾಧ್ಯವಿಲ್ಲ. ಈ ಕೇಸ್‌ನ್ನು ತುಂಬ ಮುಂದೂಡಲು ಸಾಧ್ಯವಿಲ್ಲ. ಆದಷ್ಟು ಬೇಗ ತೀರ್ಪು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು.
ಇದನ್ನೂ ಓದಿ | ಶಹೀನ್ ಬಾಗ್ ತೆರವು ಕೇಸ್: ವಿಚಾರಣೆಗೆ ನಕಾರ, ಹೈಕೋರ್ಟ್‌ಗೆ ಹೋಗಲು ಅರ್ಜಿದಾರರಿಗೆ ಸುಪ್ರೀಂ ಸೂಚನೆ