ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ (Delhi MCD) ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಒಂದು ಮತ ಅಮಾನ್ಯವಾಗಿದ್ದರಿಂದ, ಫೆ.27ರಂದು ಮರು ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಮರು ಚುನಾವಣೆಗೆ ದೆಹಲಿ ಹೈಕೋರ್ಟ್ ತಡೆ (Stayed)ನೀಡಿದೆ. ‘ದೆಹಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಯನ್ನು ಅನೂರ್ಜಿತ ಅಥವಾ ಅಮಾನ್ಯ ಎಂದು ಘೋಷಿಸುವ ಅಧಿಕಾರ ಮೇಯರ್ಗೆ ಇಲ್ಲ ಎಂದು ದೆಹಲಿ ಮಹಾನಗರ ಪಾಲಿಕೆ ಕಾಯ್ದೆ (DMC Act)51ನೇ ನಿಯಮದಲ್ಲಿ ಹೇಳಲಾಗಿದೆ. ಅದರ ಅನ್ವಯ ಫೆ.24ರಂದು ನಡೆದ ಚುನಾವಣೆಯ ಅನೂರ್ಜಿತ ಎಂದು ಮೇಯರ್ ತೀರ್ಮಾನ ಮಾಡುವಂತಿಲ್ಲ’ ಎಂದು ಹೈಕೋರ್ಟ್ ಹೇಳಿದೆ. ಹಾಗೇ, 27ರಂದು ನಡೆಸಲು ಉದ್ದೇಶಿಸಿದ್ದ ಮರು ಚುನಾವಣೆಗೆ ತಡೆ ನೀಡಿ ಆದೇಶ ಹೊರಡಿಸುವ ಜತೆ, ಮೇಯರ್ ಶೆಲ್ಲಿ ಒಬೆರಾಯ್ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ನೋಟಿಸ್ ನೀಡಿದೆ.
ಸ್ಥಾಯಿಸಮಿತಿಯ 6 ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆದು ಬಿಜೆಪಿಯ ಮೂವರು ಮತ್ತು ಆಪ್ನ ಮೂವರು ಸದಸ್ಯರು ಗೆದ್ದಿದ್ದಾರೆ. ಈ ಆರೂ ಮಂದಿ ಗೆದ್ದಿರುವುದನ್ನು ಆಪ್ ಒಪ್ಪಿಕೊಳ್ಳುತ್ತಿಲ್ಲ. ಮೇಯರ್ ಶೆಲ್ಲಿ ಒಬಿರಾಯ್ ಅವರು ಈ ಫಲಿತಾಂಶವನ್ನು ಪ್ರಕಟಿಸದೆ, ಒಂದು ಮತ ಅಮಾನ್ಯವಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಹಾಗೇ, ಫೆ.27ರಂದು ಮತ್ತೆ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ ಅನಗತ್ಯವಾಗಿ ಚುನಾವಣೆ ನಡೆಸಬಾರದು. ಈಗಾಗಲೇ ನಡೆದಿರುವ ಚುನಾವಣೆಯ ಫಲಿತಾಂಶವನ್ನೇ ಘೋಷಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕೌನ್ಸಿಲರ್ಗಳಾದ ಶಿಖಾ ರಾಯ್, ಕಮಲಜಿತ್ ಸೆಹ್ರಾವತ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ‘ಸ್ಥಾಯಿ ಸಮಿತಿ ಚುನಾವಣೆಗೆ ಸಂಬಂಧಪಟ್ಟಂತೆ ಮೇಯರ್ ಅವರು ರಿಟರ್ನಿಂಗ್ ಆಫೀಸರ್ ಆಗಿಯೂ ಕಾರ್ಯನಿರ್ವಹಿಸುತ್ತಾರೆ. ಆದರೆ ಯಾವುದೇ ಚುನಾವಣಾ ಫಲಿತಾಂಶ ಘೋಷಣೆ ಮಾಡದೆ, ಮರು ಚುನಾವಣೆ ದಿನಾಂಕ ಪ್ರಕಟಿಸುವುದು ಡಿಎಂಸಿ ಆ್ಯಕ್ಟ್ ನಿಯಮಗಳ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: Delhi MCD: ರಣರಂಗವಾದ ದೆಹಲಿ ಮಹಾನಗರ ಪಾಲಿಕೆ; ಬಿಜೆಪಿ ಕೌನ್ಸಿಲರ್ಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದ ಮೇಯರ್ ಶೆಲ್ಲಿ
ದೆಹಲಿ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಶೆಲ್ಲಿ ಒಬೆರಾಯ್ ‘ಫೆ.24ರ ಚುನಾವಣೆಯಲ್ಲಿ ಒಂದು ಮತ ಅಮಾನ್ಯಗೊಂಡಿತ್ತು. ಆದರೆ ಬಿಜೆಪಿಯವರು ಅದು ಅಮಾನ್ಯವಾಗಿಲ್ಲ ಎಂದೇ ಹೇಳುತ್ತಿದ್ದಾರೆ. ಅದೇ ಕಾರಣಕ್ಕೆ ಶುರುವಾದ ಗಲಾಟೆಯಿಂದಾಗಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿಲ್ಲ. ಮೂವರು ಬಿಜೆಪಿಯವರು, ಮೂವರು ಆಪ್ನವರು ಗೆದ್ದಿದ್ದಾರೆ ಎಂದು ಫಲಿತಾಂಶ ಹೇಳಿದ್ದು ಟೆಕ್ನಿಕಲ್ ಎಕ್ಸ್ಪರ್ಟ್ಗಳು. ಅವರೂ ಕೂಡ ಅದನ್ನು ಮಾಡಬಾರದಿತ್ತು. ಅವರು ನನಗೆ ಸಹಾಯ ಮಾಡಲು ಇರುವವರೇ ಹೊರತು, ಫಲಿತಾಂಶ ಬಹಿರಂಗಗೊಳಿಸಲು ಇರುವವರು ಅಲ್ಲ’ ಎಂದಿದ್ದಾರೆ.