ನವದೆಹಲಿ: ದಿಲ್ಲಿಯ ಕಂಜಾವಾಲ ಭೀಕರ (Delhi horror) ಹಿಟ್ ಆ್ಯಂಡ್ ರನ್ ಅಪಘಾತದ ಕುರಿತು ಹೊರ ಬರುತ್ತಿರುವ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿವೆ. ವಾಹನಕ್ಕೆ ಸಿಲುಕಿದ್ದ ಅಂಜಲಿ ಎಂಬ ಯುವತಿಯನ್ನು ಕಾರ್ ಚಾಲಕ ಸುಮಾರು 12 ಕಿ.ಮೀ.ವರೆಗೆ ಎಳೆದುಕೊಂಡು ಹೋಗಿದ್ದ. ಈ ಪ್ರಕರಣವು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಕಾರಿನಲ್ಲಿದ್ದ ಚಾಲಕ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದವರು ಈಗ ಪೊಲೀಸ್ ವಶದಲ್ಲಿದ್ದು, ಅವರು ನೀಡುತ್ತಿರುವ ಮಾಹಿತಿಗಳು ದಂಗಾಗಿಸುವಂತಿವೆ. ತಮ್ಮ ಕಾರಿನಡಿಗೆ ಮಹಿಳೆ ಸಿಕ್ಕಿದ್ದು ಗೊತ್ತಾಗಿತ್ತು. ಹೆದರಿಕೊಂಡು, ಕಾರು ನಿಲ್ಲಿಸಲಿಲ್ಲ ಎಂದು ಅವರು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.
ಕಾರನ್ನು ನಿಲ್ಲಿಸಿ, ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದರೆ ತಮ್ಮ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಆರೋಪಿಗಳಿಗೆ ತಿಳಿದಿತ್ತು ಎಂದು ಪೊಲೀಸರು ಹೇಳಿದ್ದಾರೆ. ವಾಹನಕ್ಕೆ ಸಿಲುಕಿದ್ದ ಶವವು ತಾನಾಗೇ ಬೀಳುವವರೆಗೂ ಅವರು ಕಾರನ್ನು ಚಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮೊದಲು, ಆರೋಪಿಗಳ ಪೈಕಿ ಒಬ್ಬ, ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ದೆವು. ಹಾಗಾಗಿ, ಕಾರಿನಡಿಗೆ ದೇಹ ಸಿಲುಕಿದ್ದು ಗೊತ್ತಾಗಲಿಲ್ಲ ಎಂದು ಹೇಳಿದ್ದ. ಆದರೆ, ಈಗ ವಿಚಾರಣೆ ವೇಳೆ ಅವರು ಸುಳ್ಳು ಹೇಳಿದ್ದು ಗೊತ್ತಾಗಿದೆ.
ಜನವರಿ 1ರಂದು ಸಂಭವಿಸಿದ ಈ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ 20 ವರ್ಷದ ಅಂಜಲಿ ಎಂಬ ಯುವತಿ ಕಾರಿನಡಿಗೆ ಸಿಲುಕಿದ್ದಳು. ಆದರೆ, ಕಾರು ಚಾಲಕ ಕಾರನ್ನು ನಿಲ್ಲಿಸದೇ ಸುಮಾರು 12 ಕಿ.ಮೀ.ವರೆಗೂ ಎಳೆದುಕೊಂಡು ಹೋಗಿದ್ದ. ಅಂಜಲಿ ಹಾಗೂ ಆಕೆಯ ಗೆಳತಿ ನಿಧಿ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ಸ್ಕೂಟಿ ಕಾರಿಗೆ ಗುದ್ದಿದ್ದರಿಂದ, ಸ್ಕೂಟಿ ಓಡಿಸುತ್ತಿದ್ದ ಅಂಜಲಿ ಕಾರಿನಡಿಗೆ ಸಿಲುಕಿದ್ದಳು. ಅದು ಗೊತ್ತಿದ್ದೂ ಕಾರ್ ಚಾಲಕರು, ಕಾರನ್ನು ದಿಲ್ಲಿಯಿಂದ ಸುಲ್ತಾನಪುರಿಯಿಂದ ಕಂಜಾವಾಲವರೆಗೆ ಎಳೆದುಕೊಂಡು ಹೋಗಿದ್ದರು ನಿಧಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.
ಇದನ್ನು ಓದಿ | Shah Rukh Khan Donation | ಭೀಕರ ಅಪಘಾತಕ್ಕೆ ಬಲಿಯಾದ ಅಂಜಲಿ ಸಿಂಗ್ ಕುಟುಂಬಸ್ಥರಿಗೆ ಶಾರುಖ್ ಖಾನ್ ನೆರವು