ನವ ದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣ(Delhi Liquor Policy)ದಲ್ಲಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ, ಭಾರತ್ ರಾಷ್ಟ್ರ ಸಮಿತಿ ಪಕ್ಷದ ಎಂಎಲ್ಸಿ ಕೆ.ಕವಿತಾ ಹೆಸರು ಈಗಾಗಲೇ ಸೇರಿಕೊಂಡಿದ್ದು, ಈಗಾಗಲೇ ಸಿಬಿಐ ವಿಚಾರಣೆಗೆ ಒಳಪಟ್ಟಿದ್ದರು. ದೆಹಲಿ ಅಬಕಾರಿ ಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಬಂಧನದ ಬೆನ್ನಲ್ಲೇ, ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಕೆ.ಕವಿತಾರನ್ನು ಶನಿವಾರ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು 9 ತಾಸು ವಿಚಾರಣೆ ನಡೆಸಿದ್ದರು. ಹಾಗೇ, ಮಾರ್ಚ್ 16ಕ್ಕೆ ಮತ್ತೆ ಬರುವಂತೆ ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಈಗ ಕೆ.ಕವಿತಾ ಅವರ ಅಡಿಟರ್ (ಲೆಕ್ಕಪರಿಶೋಧಕ) ಬುಚಿ ಬಾಬುಗೆ ಕೂಡ ಇ.ಡಿ.ಸಮನ್ಸ್ ನೀಡಿದೆ. ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ದೆಹಲಿಯಲ್ಲಿ ಎರಡು ವರ್ಷಗಳ ಹಿಂದೆ ಅಬಕಾರಿ ನೀತಿ ಜಾರಿ ಮಾಡಿದಾಗ, ಲೈಸೆನ್ಸ್ ಕೊಡುವ ವಿಚಾರದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಡಿ ಈಗಾಗಲೇ ಇಡಿ, ಸಿಬಿಐ ತನಿಖೆ ನಡೆಯುತ್ತಿದೆ. ಅದರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಲಿಕ್ಕರ್ ಉದ್ಯಮದಲ್ಲಿ ದೊಡ್ಡ ಪಾಲು ಪಡೆಯಲು ಸೌತ್ ಗ್ರೂಪ್ ಕೂಡ, ಆಮ್ ಆದ್ಮಿ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ಸಂದಾಯ ಮಾಡಿದ್ದು ಸಾಬೀತಾಗಿದೆ. ಈ ಸೌತ್ ಗ್ರೂಪ್ನಲ್ಲಿ ಇರುವವರಲ್ಲಿ ಕೆ.ಕವಿತಾ ಕೂಡ ಒಬ್ಬರು ಎನ್ನಲಾಗಿದ್ದು, ಅವರ ವಿಚಾರಣೆ ತೀವ್ರಗೊಂಡಿದೆ.
ಇದನ್ನೂ ಓದಿ: Delhi liquor policy case: ಸಿಸೋಡಿಯಾ ಅವರನ್ನು 7 ದಿನ ಇ.ಡಿ ವಶಕ್ಕೆ ನೀಡಿದ ವಿಶೇಷ ಕೋರ್ಟ್