Site icon Vistara News

Delhi Liquor Policy Case: ಮನೀಶ್​ ಸಿಸೋಡಿಯಾಗೆ ಸಿಗದ ಜಾಮೀನು; ಏ.5ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ

Delhi Liquor Policy Case judicial custody of Manish Sisodia Extended

ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ಆಪ್​ ನಾಯಕ ಮನೀಶ್​ ಸಿಸೋಡಿಯಾ (Delhi Liquor Policy Case) ಅವರ ನ್ಯಾಯಾಂಗ ಬಂಧನ ಅವಧಿ ಏಪ್ರಿಲ್​ 5ರವರೆಗೆ ಮುಂದೂಡಿಕೆಯಾಗಿದೆ. ಫೆ.26ರಿಂದ ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಅವರು, ರೂಸ್ ಅವೆನ್ಯೂ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಮಾನ್ಯವಾಗಲಿಲ್ಲ. ಬದಲಿಗೆ ನ್ಯಾಯಾಂಗ ಬಂಧನದ ಅವಧಿಯೇ ವಿಸ್ತರಣೆಗೊಂಡಿದೆ.

2021ರಲ್ಲಿ ದೆಹಲಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ಮಾಡುವಾಗ, ಚಿಲ್ಲರೆ ವ್ಯಾಪಾರಿಗಳಿಗೆ ಲೈಸೆನ್ಸ್​ ಕೊಡುವಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದಡಿ ಇಡಿ-ಸಿಬಿಐ ತನಿಖಾದಳಗಳು ತನಿಖೆ ನಡೆಸುತ್ತಿವೆ. ಅಬಕಾರಿ ಇಲಾಖೆ ಹೊಣೆಯನ್ನು ಸಿಸೋಡಿಯಾ ಅವರೇ ಹೊತ್ತಿದ್ದರಿಂದ ಅವರನ್ನೇ ನಂಬರ್​ 1 ಆರೋಪಿ ಎಂದು ಪರಿಗಣಿಸಿ, ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಅವರನ್ನು ಅರೆಸ್ಟ್ ಕೂಡ ಮಾಡಲಾಗಿದೆ. ತಂದೇನೂ ತಪ್ಪಿಲ್ಲ ಎಂದೇ ಹೇಳುತ್ತಿರುವ ಮನೀಶ್ ಸಿಸೋಡಿಯಾ ಜಾಮೀನು ನೀಡುವಂತೆ ರೂಸ್​ ಅವೆನ್ಯೂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್​ ಅವರು ಅರ್ಜಿ ವಿಚಾರಣೆ ನಡೆಸಿದ್ದರು.

ಅಬಕಾರಿ ಅಕ್ರಮ ಹಗರಣದಡಿ ಫೆ.26ರಂದು ಸಿಬಿಐ ಅಧಿಕಾರಿಗಳಿಂದ ಬಂಧಿತರಾಗಿರುವ ಮನೀಶ್ ಸಿಸೋಡಿಯಾ ಅವರನ್ನು, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ಮಾರ್ಚ್​ 9ರಂದು ಬಂಧಿಸಿದ್ದಾರೆ. ಸದ್ಯ ಅವರು ತಿಹಾರ್​ ಜೈಲಿನಲ್ಲಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಇಡಿ ಮತ್ತು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಮನೀಶ್ ಸಿಸೋಡಿಯಾ ಅವರು, ‘ತಮ್ಮ ಪತ್ನಿ ಆರೋಗ್ಯ ಸರಿಯಿಲ್ಲ. ಆಕೆಯನ್ನು ಕಾಳಜಿ ಮಾಡಲು ಯಾರೂ ಇಲ್ಲ. ಮಗ ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿದ್ದಾನೆ. ಹಾಗಾಗಿ ನಾನು ಅಲ್ಲಿ ಹೋಗಲೇಬೇಕು’ ಎಂದು ಕಾರಣ ಕೊಟ್ಟು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಿಬಿಐ ಅವರಿಗೆ ಜಾಮೀನು ನೀಡಬಾರದು ಎಂದು ಹೇಳಿತ್ತು. ಅವರು ಸರ್ಕಾರದ ಉನ್ನತ ಹುದ್ದೆಯಲ್ಲಿ ಇದ್ದಾರೆ. ಒಂದು ಸಲ ಜಾಮೀನು ಕೊಟ್ಟರೆ ಅವರು ಕಣ್ಮರೆಯಾಗಬಹುದು ಅಷ್ಟೇ ಅಲ್ಲ, ಸಾಕ್ಷ್ಯಗಳನ್ನೂ ನಾಶ ಮಾಡಬಹುದು ಎಂದು ಸಿಬಿಐ ಅಧಿಕಾರಿಗಳು ವಾದ ಮಂಡಿಸಿದ್ದರು.

ಇದನ್ನೂ ಓದಿ: Manish Sisodia: ಮನೀಶ್‌ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಹವಾಲ ಕೇಸ್‌ನಲ್ಲಿ ಬಂಧಿಸಿದ ಇ.ಡಿ

Exit mobile version