ನವ ದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣ (Delhi Liquor Policy Scam) ತೆಲಂಗಾಣಕ್ಕೂ ವ್ಯಾಪಿಸಿರುವುದು ಹಳೇ ವಿಷಯ. ಅದೀಗ ಆಂಧ್ರಪ್ರದೇಶದವರೆಗೂ ಬಂದಿದೆ. ಇಲ್ಲಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಒಂಗೋಲ್ ಕ್ಷೇತ್ರದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಪುತ್ರ ರಾಘವ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಕಳೆದವರ್ಷ ದೆಹಲಿಯಲ್ಲಿ ಆಪ್ ಸರ್ಕಾರ ಜಾರಿ ಮಾಡಿದ್ದ ನೂತನ ಅಬಕಾರಿ ನೀತಿಯಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಆಗಿರುವ ಸಂಬಂಧ ಸಿಬಿಐ ಮತ್ತು ಇಡಿ ತನಿಖಾದಳಗಳು ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಮದ್ಯ ಉದ್ಯಮಿಗಳು, ಮೀಡಿಯೇಟರ್ಗಳನ್ನು ಬಂಧಿಸಿವೆ. ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಇಂಡೋಸ್ಪಿರಿಟ್ ಪಾನೀಯ ಕಂಪನಿಯ ಸಂಸ್ಥಾಪಕ, ಮಾಲೀಕ ಸಮೀರ್ ಮಹೇಂದ್ರು ಅವರನ್ನು ಈಗಾಗಲೇ ಇಡಿ ಬಂಧಿಸಿದೆ. ಹಾಗೇ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ ಅವರನ್ನು ಸಿಬಿಐ ಮತ್ತು ಇಡಿ ತನಿಖಾದಳಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿವೆ. ಹಾಗೇ, ‘ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಿಕ್ಕರ್ ಉದ್ಯಮದಲ್ಲಿ ಹಿಡಿತ ಸಾಧಿಸಲು ‘ಸೌತ್ ಗ್ರೂಪ್’ ನಿಂದ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ಹೋಗಿದೆ. ಈ ಗ್ರೂಪ್ನಲ್ಲಿ ಕೆ. ಕವಿತಾ ಒಬ್ಬರು ಹೌದು. ಇನ್ನಿಬ್ಬರು ಅರಬಿಂದೋ ಔಷಧ ಕಂಪನಿಯ ಶರತ್ ಚಂದ್ರ ರೆಡ್ಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ. ಇವರೆಲ್ಲರೂ ಆಪ್ನ ಪ್ರತಿನಿಧಿ ವಿಜಯ್ ನಾಯರ್ಗೆ ಹಣ ಕೊಟ್ಟಿದ್ದಾರೆ’ ಎಂದು ಇಡಿ ಮೊದಲ ಚಾರ್ಜ್ಶೀಟ್ ಸಲ್ಲಿಸಿತ್ತು.
ಇದನ್ನೂ ಓದಿ: Delhi Liquor Policy Scam: ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಅವರ ಮಾಜಿ ಆಡಿಟರ್‌ನನ್ನು ಬಂಧಿಸಿದ ಸಿಬಿಐ
ಅದಾದ ಬಳಿಕ ಎರಡನೇ ಚಾರ್ಜ್ಶೀಟ್ ಸಲ್ಲಿಸಿದ್ದ ಇ.ಡಿ. ಅಧಿಕಾರಿಗಳು, ‘ಇಂಡೋಸ್ಪಿರಿಟ್ ಕಂಪನಿಯ ನಿಜವಾದ ಮಾಲೀಕರು ಕೆ. ಕವಿತಾ ಮತ್ತು ರಾಘವ್’ ಎಂದು ಹೇಳಿದ್ದರು. ‘ಬಂಧಿತನಾಗಿರುವ ಮದ್ಯ ಉದ್ಯಮಿ ಅರುಣ್ ಪಿಳ್ಳೈ ಹೇಳಿಕೆ ನೀಡಿ, ಕೆ.ಕವಿತಾ ಮತ್ತು ಆಪ್ ಮಧ್ಯೆ ಒಪ್ಪಂದ ಇರುವ ಬಗ್ಗೆ ಮೊದಲ ಬಾರಿಗೆ ಬಾಯ್ಬಿಟ್ಟಿದ್ದ. ಅದರ ಆಧಾರದ ಮೇಲೆಯೇ ಕೆ.ಕವಿತಾಗೆ ಸಮನ್ಸ್ ನೀಡಿ, ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖಾದಳಗಳು ಹೀಗೆ ಒಬ್ಬೊಬ್ಬರ ವಿಚಾರಣೆ ನಡೆಸಿದಾಗಲೂ ಸಿಗುವ ಮಾಹಿತಿಯನ್ನಾಧರಿಸಿ ತನಿಖೆಯನ್ನು ತೀವ್ರಗೊಳಿಸುತ್ತಿದೆ. ಈ ವಾರದಲ್ಲಿ ರಾಘವ್ ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.