ನವ ದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ (Delhi Liquor Scam) ಪ್ರಕರಣದಡಿ ಇನ್ನೊಬ್ಬ ಉದ್ಯಮಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಹಣ ಅಕ್ರಮ ವರ್ಗಾವಣೆ ಆರೋಪದಿ ಹೈದರಾಬಾದ್ ಮೂಲಕ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಇ.ಡಿ.ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ದೆಹಲಿಯಲ್ಲಿ 2021ರಲ್ಲಿ ಜಾರಿಯಾಗಿದ್ದ ನೂತನ ಅಬಕಾರಿ ನೀತಿ ಅಕ್ರಮದಲ್ಲಿ ‘ಸೌತ್ ಗ್ರೂಪ್’ (ದಕ್ಷಿಣ ಭಾರತದ ಕೆಲವು ಪ್ರಮುಖ ರಾಜಕಾರಣಿಗಳು, ಉದ್ಯಮಿಗಳನ್ನು ಒಳಗೊಂಡ ಗುಂಪು) ಪಾಲೂ ಇದೆ. ದೆಹಲಿ ಲಿಕ್ಕರ್ ಉದ್ಯಮದಲ್ಲಿ ಹಿಡಿತ ಸಾಧಿಸಿ, ಲಾಭ ಮಾಡಿಕೊಳ್ಳಲು ಈ ಸೌತ್ ಗ್ರೂಪ್, ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಕಿಕ್ಬ್ಯಾಕ್ ನೀಡಿದೆ ಎಂದು ಈಗಾಗಲೇ ಇ.ಡಿ.ಚಾರ್ಜ್ಶೀಟ್ ಸಲ್ಲಿಸಿದೆ. ಸೌತ್ಗ್ರೂಪ್ನಲ್ಲಿ ಇರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾರನ್ನು ಇಡಿ-ಸಿಬಿಐಗಳು ವಿಚಾರಣೆಗೆ ಒಳಪಡಿಸಿವೆ. ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಪುತ್ರ ರಾಘವ್ ಅವರನ್ನೂ ಬಂಧಿಸಲಾಗಿದೆ. ಈಗ ಬಂಧಿತರಾಗಿರುವ ಅರುಣ್ ರಾಮಚಂದ್ರ ಪಿಳ್ಳೈ ಅವರೂ ಕೂಡ ಇದೇ ಸೌತ್ಗ್ರೂಪ್ನಲ್ಲಿದ್ದವರು ಎಂದು ಇ.ಡಿ.ಹೇಳಿದೆ.
ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಹಗರಣ, ಐವರು ಆರೋಪಿಗಳ ಜಾಮೀನು ಅರ್ಜಿ ವಜಾ
ದೆಹಲಿಯಲ್ಲಿ ಈಗೆರಡು ವರ್ಷಗಳ ಹಿಂದೆ ನೂತನ ಅಬಕಾರಿ ನೀತಿಯನ್ನು ಆಮ್ ಆದ್ಮಿ ಪಕ್ಷ ಜಾರಿ ಮಾಡಿತ್ತು. ಆದರೆ ಇದರಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಲೈಸೆನ್ಸ್ ಕೊಡುವಾಗ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿದೆ ಎಂಬುದು ಆರೋಪ. ಅಬಕಾರಿ ನೀತಿ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅದರಂತೆ ಸಿಬಿಐ ಮತ್ತು ಇಡಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿವೆ. ಅಬಕಾರಿ ಇಲಾಖೆ ಉಸ್ತುವಾರಿ ಸಚಿವ ಮನೀಷ್ ಸಿಸೋಡಿಯಾ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಸದ್ಯ ಅವರು ತಿಹಾರ್ ಜೈಲಿನಲ್ಲಿ ಇದ್ದಾರೆ.