ನವ ದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ (Delhi Liquor Scam) ತನಿಖೆ ನಡೆಸುತ್ತಿರುವ ಇ.ಡಿ. ಮತ್ತು ಸಿಬಿಐ ತನಿಖಾದಗಳು ಈಗಾಗಲೇ ದೆಹಲಿ ಉಪಮುಖ್ಯಮಂತ್ರಿ, ಅಬಕಾರಿ ಇಲಾಖೆ ಉಸ್ತುವಾರಿ ಮನೀಶ್ ಸಿಸೋಡಿಯಾ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಸೇರಿ ಹಲವರನ್ನು ವಿಚಾರಣೆಗೆ ಒಳಪಡಿಸಿವೆ. ಅಷ್ಟೇ ಅಲ್ಲ, ದೆಹಲಿಯ ಪ್ರಮುಖ ಲಿಕ್ಕರ್ ಉದ್ಯಮಿಗಳ ಬಂಧನವೂ ಆಗಿದೆ. ಈಗ ಮತ್ತೊಂದು ಹೊಸ ಬೆಳವಣಿಗೆಯಲ್ಲಿ ದೆಹಲಿ ಅಬಕಾರಿ ಅಕ್ರಮಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ (Personal Assistant)ನಿಗೆ ಇಡಿ ಸಮನ್ಸ್ ನೀಡಿದೆ.
ದೆಹಲಿ ಅಬಕಾರಿ ಅಕ್ರಮ ಹಗರಣದಡಿ ಈಗಾಗಲೇ ಮನೀಶ್ ಸಿಸೋಡಿಯಾ ವಿಚಾರಣೆ ನಡೆದಿದೆ. ಅವರ ಮನೆ-ಕಚೇರಿಗಳಲ್ಲಿ ಶೋಧ ಕಾರ್ಯವೂ ನಡೆದಿತ್ತು. ಆದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇತ್ತೀಚೆಗೆ ಮತ್ತೆ ಸಿಬಿಐ ಸಮನ್ಸ್ ನೀಡಿದೆ. ಅದರ ಬೆನ್ನಲ್ಲೇ ಇಡಿ ಮತ್ತೊಂದು ಪೂರಕ ಚಾರ್ಜ್ಶೀಟ್ ಸಲ್ಲಿಸಿದೆ. ಮುಖ್ಯಮಂತ್ರಿಯ ಆಪ್ತ ಸಹಾಯಕನನ್ನು ವಿಚಾರಣೆಗೆ ಕರೆದಿದೆ.
ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಅಕ್ರಮ; ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಮತ್ತೆ ಸಿಬಿಐ ಸಮನ್ಸ್
ಅದಕ್ಕೂ ಮೊದಲು ಒಂದು ಚಾರ್ಜ್ಶೀಟ್ ಸಲ್ಲಿಸಿದ್ದ ಇಡಿ, ‘ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಿಕ್ಕರ್ ಉದ್ಯಮದಲ್ಲಿ ಹಿಡಿತ ಸಾಧಿಸಲು ‘ಸೌತ್ ಗ್ರೂಪ್’ ನಿಂದ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ಹೋಗಿದೆ. ಈ ಗ್ರೂಪ್ನಲ್ಲಿ ತೆಲಂಗಾಣ ಸಿಎಂ ಪುತ್ರಿ ಕೆ. ಕವಿತಾ ಒಬ್ಬರು ಹೌದು. ಇನ್ನಿಬ್ಬರು ಅರಬಿಂದೋ ಔಷಧ ಕಂಪನಿಯ ಶರತ್ ಚಂದ್ರ ರೆಡ್ಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ. ಇವರೆಲ್ಲರೂ ಆಪ್ನ ಪ್ರತಿನಿಧಿ ವಿಜಯ್ ನಾಯರ್ಗೆ ಹಣ ಕೊಟ್ಟಿದ್ದಾರೆ’ ಎಂದು ಹೇಳಿತ್ತು. ಈ ಪ್ರಕರಣದಡಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಒಂಗೋಲ್ ಕ್ಷೇತ್ರದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಪುತ್ರ ರಾಘವ್ ಕೂಡ ಬಂಧಿತರಾಗಿದ್ದಾರೆ.