ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳಾದರೂ, ಗೊಂದಲ-ಗದ್ದಲ ಕಾರಣದಿಂದ ಬಾಕಿಯಿದ್ದ ಮೇಯರ್ ಆಯ್ಕೆ ಚುನಾವಣೆ (Delhi Mayor Election) ಇಂದು ನಡೆಯಲಿದೆ. ನಾಮನಿರ್ದೇಶನಗೊಂಡ ಸದಸ್ಯರಿಗೂ ಮತದಾನದ ಹಕ್ಕನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ನೀಡಿದ್ದರು. ಇದನ್ನು ಬಿಜೆಪಿ ಬೆಂಬಲಿಸಿತ್ತು, ಆದರೆ ಆಮ್ ಆದ್ಮಿ ಪಕ್ಷ ವಿರೋಧಿಸಿತ್ತು. ಅಂತಿಮವಾಗಿ ಗಲಾಟೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ‘ನಾಮ ನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇಂದು ಮೇಯರ್ ಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಕೂಡ ಕಣದಲ್ಲಿದ್ದು, ಗೆಲ್ಲುವ ನಿರೀಕ್ಷೆಯಲ್ಲಿ ಆ ಪಕ್ಷ ಇದೆ.
ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15ವರ್ಷಗಳಿಂದ ಇದ್ದ ಆಡಳಿತವನ್ನು ಈ ಬಾರಿ ಆಪ್ ಕೊನೆಗಾಣಿಸಿದೆ. 250 ವಾರ್ಡ್ಗಳಲ್ಲಿ 134 ಸೀಟ್ಗಳನ್ನು ಗೆದ್ದು ಪಾಲಿಕೆ ಚುಕ್ಕಾಣಿ ಹಿಡಿದಿದೆ. ಆದರೆ ಮೇಯರ್ ಆಯ್ಕೆಯೇ ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಅಂತಿಮವಾಗಿ ಇಂದು ನಡೆಯಲಿರುವ ದೆಹಲಿ ಮೇಯರ್ -ಉಪಮೇಯರ್ ಚುನಾವಣೆ ಕುತೂಹಲ ಮೂಡಿಸಿದೆ. ಮೇಯರ್ ಸ್ಥಾನಕ್ಕೆ ಆಪ್ನಿಂದ ಶೆಲ್ಲಿ ಓಬೆರಾಯ್ ಮತ್ತು ಆಶು ಠಾಕೂರ್ ಅಭ್ಯರ್ಥಿಯಾಗಿದ್ದಾರೆ. ಅದರಲ್ಲೂ ಶೆಲ್ಲಿ ಓಬೆರಾಯ್ ಅವರೇ ಮುಖ್ಯ ಅಭ್ಯರ್ಥಿ. ಬಿಜೆಪಿ ರೇಖಾ ಗುಪ್ತಾರನ್ನು ಕಣಕ್ಕಿಳಿಸಿದೆ. ಹಾಗೇ, ಉಪಮೇಯರ್ ಸ್ಥಾನಕ್ಕೆ ಆಪ್ನಿಂದ ಅಲಿ ಮೊಹಮ್ಮದ್ ಇಕ್ಬಾಲ್ ಅಭ್ಯರ್ಥಿ ಮತ್ತು ಬಿಜೆಪಿಯಿಂದ ಕಮಲ್ ಬಾಗ್ರಿ ಕಣದಲ್ಲಿದ್ದಾರೆ. ಇಲ್ಲಿ ಬಿಜೆಪಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿದ್ದರೂ, ಮೇಯರ್-ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದೆ.
ಇದನ್ನೂ ಓದಿ: Delhi Mayoral Poll: ದಿಲ್ಲಿ ಮೇಯರ್ ಆಯ್ಕೆಗೆ ಕೊನೆಗೂ ಮುಹೂರ್ತ ಫಿಕ್ಸ್! ಬುಧವಾರ ನಡೆಯಲಿದೆ ಎಲೆಕ್ಷನ್