ನವ ದೆಹಲಿ: ಹದಿನೈದು ವರ್ಷಗಳಿಂದ ಬಿಜೆಪಿ ಕೈಯಲ್ಲಿದ್ದ ದೆಹಲಿ ಮಹಾನಗರ ಪಾಲಿಕೆ ಆಮ್ ಆದ್ಮಿ ಪಕ್ಷದ ಮಡಿಲಿಗೆ ಬಿದ್ದಿದೆ. ಡಿಸೆಂಬರ್ 4ರಂದು ನಡೆದಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿತ್ತು. ಆರಂಭಿಕ ಟ್ರೆಂಡ್ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಆದರೆ ಬರುಬರುತ್ತ ಆಪ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಫೈಟ್ ಉಂಟಾಗಿತ್ತು. ಅಂತಿಮವಾಗಿ ಆಮ್ ಆದ್ಮಿ ಪಕ್ಷ 126 ವಾರ್ಡ್ಗಳನ್ನು ಗೆದ್ದು, ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದಿದೆ.
ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 250 ವಾರ್ಡ್ಗಳು ಇದ್ದು, ಗೆಲ್ಲುವ ಪಕ್ಷ ಕನಿಷ್ಠ 125 ವಾರ್ಡ್ಗಳಲ್ಲಾದರೂ ಗೆಲ್ಲಬೇಕು. ಮಧ್ಯಾಹ್ನದ ಹೊತ್ತಿಗೆ 126 ವಾರ್ಡ್ಗಿಂತಲೂ ಹೆಚ್ಚು ವಾರ್ಡ್ಗಳಲ್ಲಿ ಆಪ್ ಅಭ್ಯರ್ಥಿಗಳು ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷದ ಜಯ ಖಚಿತಪಟ್ಟಿತು. ಅಲ್ಲಿಗೆ 15 ವರ್ಷಗಳ ಬಿಜೆಪಿ ಆಡಳಿತ ಮಹಾನಗರ ಪಾಲಿಕೆಯಲ್ಲಿ ಕೊನೆಗೊಂಡಿತು. ಗೆಲುವಿನ ಬೆನ್ನಲ್ಲೇ ಟ್ವೀಟ್ ಮಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ‘ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆಯಿಟ್ಟು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲ್ಲಿಸಿದ ದೆಹಲಿ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದಗಳು. ಜಗತ್ತಿನ ಅತಿದೊಡ್ಡ ಮತ್ತು ನೆಗೆಟಿವ್ ಪಕ್ಷವನ್ನು ಸೋಲಿಸಿದ ದೆಹಲಿ ಜನರು, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಅರವಿಂದ್ ಕೇಜ್ರಿವಾಲ್ರನ್ನು ಗೆಲ್ಲಿಸಿದ್ದಾರೆ. ನಮ್ಮ ಪಾಲಿಗೆ ಇದು ಕೇವಲ ಗೆಲುವಲ್ಲ, ದೊಡ್ಡ ಜವಾಬ್ದಾರಿ’ ಎಂದು ಹೇಳಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಆಪ್ನ ಪ್ರಮುಖ ನಾಯಕರೆಲ್ಲ ಸೇರಿದ್ದಾರೆ. ಮನೀಶ್ ಸಿಸೋಡಿಯಾ, ಭಗವಂತ್ ಮಾನ್, ರಾಘವ್ ಛಡ್ಡಾ ಮತ್ತಿತರರು ಈಗಾಗಲೇ ಕೇಜ್ರಿವಾಲ್ ಮನೆಗೆ ಆಗಮಿಸಿದ್ದು, ಸಭೆ ನಡೆಯುತ್ತಿದೆ. ಇನ್ನೇನು ಕೆಲವೇ ಹೊತ್ತಲ್ಲಿ ಇವರೆಲ್ಲರೂ ಸೇರಿ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪಕ್ಷದ ಕಾರ್ಯಕರ್ತರೂ ಕೂಡ ಈಗಾಗಲೇ ಆಪ್ ಕಚೇರಿ ಎದುರು ಸೇರುತ್ತಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: Delhi MCD Election| ಗೆಲುವಿನೆಡೆಗೆ ಹೆಜ್ಜೆ ಹಾಕುತ್ತಿರುವ ಆಮ್ ಆದ್ಮಿ ಪಕ್ಷ; ಸದ್ಯ ಬಿಜೆಪಿಗೆ 60 ವಾರ್ಡ್ಗಳಲ್ಲಿ ಗೆಲುವು