Site icon Vistara News

ಸಿಬಿಐ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ದೆಹಲಿ ಸರ್ಕಾರದ ಯೂ ಟರ್ನ್‌; ನೂತನ ಅಬಕಾರಿ ನೀತಿ ವಾಪಸ್‌

Delhi Liquor Policy

ನವ ದೆಹಲಿ: ದೆಹಲಿ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿದ್ದ ನೂತನ ಅಬಕಾತಿ ನೀತಿಯನ್ನು ಈಗ ಹಿಂಪಡೆದಿದೆ. ಅದರ ಅನ್ವಯ 2022ರ ಆಗಸ್ಟ್‌ 1ನೇ ತಾರೀಖಿನಿಂದ ಹಳೇ ನೀತಿಯೇ ಮುಂದುವರಿಯಲಿದೆ. ಹೊಸ ನೀತಿ ಜಾರಿಗೂ ಮೊದಲು ಸರ್ಕಾರದಿಂದ ಪರವಾನಗಿ ಪಡೆದ ಮದ್ಯದಂಗಡಿಗಳು ಮಾತ್ರ ತೆರೆದಿರಲಿವೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ. ʼನಾವು ಕಳೆದ ನವೆಂಬರ್‌ನಲ್ಲಿ ಜಾರಿಗೊಳಿಸಿದ್ದ ನೂತನ ಅಬಕಾರಿ ನೀತಿಯನ್ನು ಇನ್ನಷ್ಟು ಪರಿಶೀಲನೆ ಮಾಡಿ, ಅದನ್ನು ಸರಳೀಕರಿಸುವವರೆಗೂ ಯಾವುದೇ ಖಾಸಗಿ ಮದ್ಯದಂಗಡಿಗಳು ತೆರೆಯುವುದಿಲ್ಲʼ ಎಂದೂ ಸ್ಪಷ್ಟಪಡಿಸಿದ್ದಾರೆ.

ಇದೀಗ ನೂತನ ಅಬಕಾರಿ ನೀತಿಯನ್ನು ದೆಹಲಿ ಸರ್ಕಾರ ಹಿಂಪಡೆದಿದ್ದರಿಂದ ನಗರದಲ್ಲಿ ಒಟ್ಟು 468 ಖಾಸಗಿ ಮದ್ಯದ ಅಂಗಡಿಗಳು ಬಾಗಿಲು ಮುಚ್ಚಲಿವೆ. ಇದು ಸಹಜವಾಗಿಯೇ ಮದ್ಯ ಪ್ರೇಮಿಗಳಿಗೆ ಸ್ವಲ್ಪ ಮಟ್ಟಿಗಿನ ಬೇಸರದ ಸಂಗತಿ. ಹೀಗೆ ಹೊಸ ಅಬಕಾರಿ ನೀತಿಯನ್ನು ಆಪ್‌ ಸರ್ಕಾರ ಹಿಂಪಡೆಯಲು ಕಾರಣ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ. ದೆಹಲಿ ಸರ್ಕಾರ 2021ರ ನವೆಂಬರ್‌ 17ರಂದು ಜಾರಿಗೊಳಿಸಿದ್ದ ನಿಯಮದ ಅನ್ವಯ, ʼನಗರವನ್ನು ಒಟ್ಟು 32 ವಲಯಗಳಾಗಿ ವಿಂಗಡಿಸಿ, ಅಲ್ಲಿನ ಖಾಸಗಿ ಬಿಡ್ಡರ್‌ಗಳಿಗೆ ಮದ್ಯ ಚಿಲ್ಲರೆ ವ್ಯಾಪಾರಕ್ಕಾಗಿ ಪರವಾನಗಿ ನೀಡಲಾಗಿತ್ತು. ಸುಮಾರು 849 ಖಾಸಗಿ ವ್ಯಾಪಾರಿಗಳಿಗೆ ಪರವಾನಗಿ ಆಗ ಸಿಕ್ಕಿತ್ತು. ಹಾಗಿದ್ದಾಗ್ಯೂ ಸ್ಥಳ ವಿವಾದ, ಮುನ್ಸಿಪಲ್‌ ಕಾರ್ಪೋರೇಶನ್‌ನಿಂದ ಹಲವು ಜಾಗಗಳು ಸೀಲ್‌ ಆದ ಕಾರಣಕ್ಕೆ ಪರವಾನಗಿ ಪಡೆದ ಅನೇಕರಿಗೆ ಅಂಗಡಿ ತೆರೆಯಲು ಸಾಧ್ಯವಾಗಿರಲಿಲ್ಲ.

ಇದೆಲ್ಲದರ ಮಧ್ಯೆ ದೆಹಲಿ ಸರ್ಕಾರದ ನೂತನ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ. ಮನೀಶ್‌ ಸಿಸೋಡಿಯಾ ಕೈಯಲ್ಲಿರುವ ಅಬಕಾರಿ ಇಲಾಖೆ, ಹೊಸ ನೀತಿಯನ್ನೇನೋ ರಚಿಸಿದೆ. ಆದರೆ ಇದು ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಪರವಾನಗಿ ನೀಡುವಲ್ಲಿ ನಡೆದ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ನೂತನ ಅಬಕಾರಿ ನೀತಿಯನ್ನು 2021-22ರ ಮಾರ್ಚ್‌ 31ರ ನಂತರವೇ ಎರಡು ಬಾರಿ ವಿಸ್ತರಣೆಯಾಗಿದೆ. ಇದೀಗ ಜುಲೈ 31ಕ್ಕೆ ಮತ್ತೆ ಈ ನೀತಿಯ ಅವಧಿ ಮುಕ್ತಾಯಗೊಳ್ಳುತ್ತದೆ. ಈ ಮಧ್ಯೆ 2022-23ರ ಅಬಕಾರಿ ನೀತಿಯ ಕರಡು ಪ್ರಸ್ತಾಪವನ್ನು ದೆಹಲಿ ಸರ್ಕಾರ ಸಿದ್ಧಪಡಿಸುತ್ತಿದೆ. ಅದರಡಿಯಲ್ಲಿ, ಮದ್ಯವನ್ನು ಮನೆಗೆ ಪೂರೈಕೆ ಮಾಡುವ (ಹೋಂ ಡೆಲಿವರಿ) ಪಸ್ತಾವನೆಯನ್ನೂ ಉಲ್ಲೇಖಿಸಲಾಗಿದೆ. ಆದರೆ ಕರಡು ಪಸ್ತಾಪ ಇನ್ನೂ ಲೆಫ್ಟಿನೆಂಟ್‌ ಗವರ್ನರ್‌ ಎದುರು ಬಂದಿಲ್ಲ. ಇದು ಗವರ್ನಮೆಂಟ್‌ ಆಫ್‌ ನ್ಯಾಶನಲ್‌ ಕ್ಯಾಪಿಟಲ್‌ ಟೆರಿಟರಿ ಆಪ್‌ ದೆಹಲಿ (ತಿದ್ದುಪಡಿ) ಕಾಯ್ದೆ, 2021ರ ಸ್ಪಷ್ಟ ಉಲ್ಲಂಘನೆ. (ಚುನಾಯಿತ ಸರ್ಕಾರ ರಾಜ್ಯಪಾಲರಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ಈ ಕಾಯ್ದೆ ಉಲ್ಲೇಖಿಸುತ್ತದೆ) ಎಂದು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೂತನ ಅಬಕಾರಿ ನೀತಿಯ ವಿಷಯದ ತನಿಖೆಗೆ ಆಗ್ರಹ ಕೇಳಿಬರುತ್ತಿದ್ದಂತೆ ದೆಹಲಿ ಆಪ್‌ ಸರ್ಕಾರವೀಗ ಯೂಟರ್ನ್‌ ಹೊಡೆದಿದೆ. ನಾವೀಗ ಸದ್ಯದ ಮಟ್ಟಿಗೆ ಹೊಸ ನೀತಿಯನ್ನು ವಾಪಸ್‌ ಪಡೆಯುತ್ತಿದ್ದೇವೆ ಎಂದು ಹೇಳಿಕೊಂಡಿದೆ. ಹಾಗೇ, ಮನೀಶ್‌ ಸಿಸೋಡಿಯಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼಬಿಜೆಪಿ ಸಿಬಿಐ ಮತ್ತು ಇಡಿಗಳಂಥ ತನಿಖಾ ಏಜೆನ್ಸಿಗಳ ಮೂಲಕ ಮದ್ಯ ಪರವಾನಗಿಗಳಿಗೂ ತಡೆಯುಂಟುಮಾಡುತ್ತಿದೆ. ಈ ಪಕ್ಷದಿಂದಾಗಿ ಹಲವರು ಅಂಗಡಿ ಮುಚ್ಚಿದ್ದಾರೆ. ಪರವಾನಗಿ ಕೊಡುವ ಸಂಬಂಧ ಹರಾಜು ಕರೆಯಲೂ ಅಧಿಕಾರಿಗಳು ಹೆದರುತ್ತಿದ್ದಾರೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಸಮಿತಿ ರಚನೆಗೆ ವಿರೋಧ ; ಆ.22ಕ್ಕೆ ದೆಹಲಿಯಲ್ಲಿ ಕಿಸಾನ್ ಮಹಾ ಪಂಚಾಯತ್

Exit mobile version