ನವದೆಹಲಿ: ಪ್ರವಾದಿ ಮೊಮಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ಇಸ್ಲಾಂ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ್ದ ದೆಹಲಿ ಮಾಧ್ಯಮ ಮಾಜಿ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಎರಡನೇ ಎಫ್‌ಐಆರ್‌ನಲ್ಲಿ ನವೀನ್ ಕುಮಾರ್ ಜಿಂದಾಲ್, ಪತ್ರಕರ್ತೆ ಸಾಬಾ ನಖ್ವಿ, ಪೀಸ್ ಪಾರ್ಟಿ ಮುಖ್ಯ ವಕ್ತಾರ ಶದಾಬ್ ಚೌಹಾಣ್, ರಾಜಸ್ಥಾನ ಮೂಲದ ಮೌಲಾನಾ ಮುಫ್ತಿ ನದೀಮ್, ಅನಿಲ್ ಕುಮಾರ್ ಮೀನಾ, ಹಿಂದು ಮಹಾಸಭಾದ ಪದಾಧಿಕಾರಿ ಪೂಜಾ ಶಕುನ್ ಪಾಂಡೆ, ಅಬ್ದುರ್ ರೆಹಮಾನ್ ಸೇರಿ ಒಟ್ಟು ಎಂಟು ಮಂದಿಯ ಹೆಸರಿದೆ. ಇವರೆಲ್ಲರೂ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸ್ ವಿಶೇಷ ಘಟಕ ತಿಳಿಸಿದೆ. ಇವರೆಲ್ಲ ದ್ವೇಷ ಬಿತ್ತಿ, ಸೌಹಾರ್ದತೆ ಕದಡುವ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಕೆಪಿಎಸ್ ಮಲ್ಹೋತ್ರಾ, ʼಇವರೆಲ್ಲರೂ ಕೋಮು ಸೌಹಾರ್ದತೆ ಕದಡುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಹಾಕಿದ್ದರು. ಇವರುಗಳಿಂದಾಗಿ ಸಾಮಾಜಿಕ ವ್ಯವಸ್ಥೆ ಹದಗೆಟ್ಟಿದೆ. ಸಾರ್ವಜನಿಕರ ನೆಮ್ಮದಿ ಹಾಳಾಗಿದೆ. ಒಂದು ಧರ್ಮದ ಜನರನ್ನು ಪ್ರಚೋದಿಸುವ ರೀತಿಯ ಹೇಳಿಕೆಗಳಿಂದಾಗಿ ಕಾನೂನು-ಸುವ್ಯವಸ್ಥೆ ಕೂಡ ಹದಗೆಟ್ಟಿದೆ. ಇಂಥ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಸೃಷ್ಟಿಸಿದ ವಿವಾದದ ಬಗ್ಗೆ ಕೆದಕಿ ಪ್ರಶ್ನಿಸಿದ ಪಾಕ್ ಪತ್ರಕರ್ತ; ವಿಶ್ವ ಸಂಸ್ಥೆಯ ಉತ್ತರ ಹೀಗಿದೆ
ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿದ ಬೆನ್ನಲ್ಲೇ ಹಲವು ಮುಸ್ಲಿಂ ಮುಖಂಡರು ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ. ಅದರಲ್ಲಿ ರಾಜಸ್ಥಾನದ ಈ ಮೌಲಾನಾ ಮುಫ್ತಿ ನದೀಮ್ ಹಿಂದೂಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಅದೇ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಇನ್ನು ಹಿಂದು ಮಹಾಸಭಾದ ಪದಾಧಿಕಾರಿ ಪೂಜಾ ಶಕುನ್ ಪಾಂಡೆ ಮುಸ್ಲಿಮರ ನಮಾಜ್‌ನ್ನು ಟೀಕಿಸಿದ್ದರು. ಇನ್ನುಳಿದಂತೆ ಎಫ್‌ಐಆರ್‌ನಲ್ಲಿ ಯಾರೆಲ್ಲರ ಹೆಸರಿದೆಯೋ ಅವರೆಲ್ಲರೂ ಅನ್ಯ ಧರ್ಮದ ಜನರನ್ನು ವ್ಯಂಗ್ಯ ಮಾಡಿ, ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿದವರೇ ಆಗಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾಗೆ ನೆದರ್‌ಲ್ಯಾಂಡ್ ಸಂಸದನ ಬೆಂಬಲ; ಭಾರತೀಯರು ಒಗ್ಗಟ್ಟಾಗಲು ಕರೆ