ರಾಷ್ಟ್ರರಾಜಧಾನಿ ದೆಹಲಿಯ ವಿವಿಧ ಭಾಗಗಳಲ್ಲಿ ಹಾಕಲಾಗಿದ್ದ ಪ್ರಧಾನಿ ಮೋದಿ ವಿರೋಧಿ ಪೋಸ್ಟರ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಸಂಬಂಧ ಒಟ್ಟು 44 ಕೇಸ್ಗಳು ದಾಖಲಾಗಿದ್ದು, 100ಕ್ಕೂ ಹೆಚ್ಚು ಎಫ್ಐಆರ್ ಹಾಕಲಾಗಿದೆ. ಇಬ್ಬರು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸೇರಿ, ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಈಗಾಗಲೇ 2000 ಪೋಸ್ಟರ್ಗಳನ್ನು ತೆರವುಗೊಳಿಸಿದ್ದು, ಇನ್ನೂ ಅಳವಡಿಸದೆ ಬಾಕಿ ಇದ್ದ 10 ಸಾವಿರ ಪೋಸ್ಟರ್ಗಳನ್ನು ಜಪ್ತಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬರಹ, ಹೇಳಿಕೆಗಳನ್ನು ಒಳಗೊಂಡ ಸುಮಾರು 1 ಲಕ್ಷ ಪೋಸ್ಟರ್ಗಳನ್ನು ಪ್ರಿಂಟ್ ಮಾಡಿಸಲು ಮುದ್ರಣಾಲಯಕ್ಕೆ ಆರ್ಡರ್ ನೀಡಲಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಅಂದಹಾಗೇ, ಈ ಪೋಸ್ಟರ್ಗಳಲ್ಲಿ ಹೆಚ್ಚಿನವು, ‘ಮೋದಿ ಹಟಾವೋ, ದೇಶ್ ಬಚಾವೋ’ (ಮೋದಿಯವರನ್ನು ಇಳಿಸಿ, ದೇಶವನ್ನು ಉಳಿಸಿ) ಎಂಬ ಬರಹವನ್ನೇ ಹೊಂದಿದ್ದವು.
ಈ ಬಗ್ಗೆ ಹೇಳಿಕೆ ನೀಡಿದ ದೆಹಲಿ ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ಅವರು, ‘ಆಕ್ಷೇಪಾರ್ಹ ಪೋಸ್ಟರ್ಗಳನ್ನು ತೆರವುಗೊಳಿಸಲಾಗಿದೆ. ಈಗಾಗಲೇ 6 ಮಂದಿಯನ್ನು ಬಂಧಿಸಿ 100ಕ್ಕೂ ಹೆಚ್ಚು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಪೋಸ್ಟರ್ಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಪ್ರಿಂಟಿಂಗ್ ಪ್ರೆಸ್ ಆ್ಯಕ್ಟ್ ಮತ್ತು ಆಸ್ತಿ ವಿರೂಪಗೊಳಿಸುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಈಗಾಗಲೇ ಅರೆಸ್ಟ್ ಆದ ಎರಡು ಪ್ರಿಂಟಿಂಗ್ ಪ್ರೆಸ್ಗಳ ಮಾಲೀಕರು ‘ತಮಗೆ ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ಗಳನ್ನು ತಲಾ 50 ಸಾವಿರಗಳಷ್ಟು ಪ್ರಿಂಟ್ ಮಾಡಲು ಆರ್ಡರ್ ಬಂದಿದ್ದಾಗಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ವ್ಯಂಗ್ಯ
ದೆಹಲಿಯಲ್ಲಿ ಹೀಗೆ ಪೊಲೀಸರು ಪ್ರಧಾನಿ ಮೋದಿ ವಿರುದ್ಧದ ಪೋಸ್ಟರ್ಗಳನ್ನು ತೆರವುಗೊಳಿಸಿ, ಆರು ಮಂದಿಯನ್ನು ಬಂಧಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಅದನ್ನು ವ್ಯಂಗ್ಯ ಮಾಡಿದೆ. ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷ ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರದ ಉತ್ತುಂಗದಲ್ಲಿದೆ. ಹೀಗೆ 100 ಎಫ್ಐಆರ್ಗಳನ್ನು ದಾಖಲಿಸುವಂಥದ್ದು, ಈ ಪೋಸ್ಟರ್ನಲ್ಲಿ ಏನಿದೆ? ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಮರೆತಂತೆ ತೋರುತ್ತಿದೆ. ಪೋಸ್ಟರ್ ಬಗ್ಗೆಯೂ ಭಯವೇಕೆ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: Karnataka Election: ಆಮ್‌ಆದ್ಮಿ ಪಕ್ಷದಿಂದ ಉತ್ತಮ ಆಡಳಿತ ನಿರೀಕ್ಷಿಸಿ: ಶಾಸಕ ದಿಲೀಪ್ ಪಾಂಡೆ
ಅದರ ಬೆನ್ನಲ್ಲೇ ಬಿಜೆಪಿ ವಕ್ತಾರ ಆಪ್ ವಿರುದ್ಧ ಕಿಡಿಕಾರಿದ್ದಾರೆ. ‘ಆಮ್ ಆದ್ಮಿ ಪಕ್ಷವೇ ಈ ಪೋಸ್ಟರ್ಗಳನ್ನು ಅಳವಡಿಸಿದ್ದು. ಆದರೆ ಅದನ್ನು ಹೇಳಿಕೊಳ್ಳುವ ಧೈರ್ಯ ಆ ಪಕ್ಷಕ್ಕೆ ಇಲ್ಲ. ಕಾನೂನು ಮೀರಿ ಪೋಸ್ಟರ್ಗಳನ್ನು ಅಂಟಿಸಿದೆ ಎಂದು ಆರೋಪಿಸಿದ್ದಾರೆ. ಅದರ ಬೆನ್ನಲ್ಲೇ ಆಪ್ ಮತ್ತೊಂದು ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿ, ದೆಹಲಿ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.