Site icon Vistara News

ದೆಹಲಿ ಪೊಲೀಸರ ಬೃಹತ್​ ಕಾರ್ಯಾಚರಣೆ; 1200 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶ, ಇಬ್ಬರು ಅರೆಸ್ಟ್​​

Drugs

ನವ ದೆಹಲಿ: ಭಾರತದಲ್ಲಿ ದೊಡ್ಡ ಮಟ್ಟದ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯೊಂದು ನಡೆದಿದೆ. ಡ್ರಗ್ಸ್​ ಹೊಂದಿದ್ದ ಅಫ್ಘಾನಿಸ್ತಾನದ ಇಬ್ಬರು ಪ್ರಜೆಗಳನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸ್​ ವಿಶೇಷ ವಿಭಾಗದ ಸಿಬ್ಬಂದಿ, ಅವರಿಂದ 1200 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಅಂದಹಾಗೇ, ಈ ಇಬ್ಬರ ಬಳಿ 312.5 ಕೆಜಿಗಳಷ್ಟು ಮೆಥಾಂಫೆಟಮೈನ್ ಡ್ರಗ್ಸ್ ಮತ್ತು 10 ಕೆಜಿ ಹೆರೋಯಿನ್​ ಇತ್ತು.

ಇಂದು ಬಂಧಿತರಾದ ಇಬ್ಬರೂ ಅಫ್ಘಾನಿಸ್ತಾನ ಪ್ರಜೆಗಳು 2016ರಿಂದಲೂ ಭಾರತದಲ್ಲೇ ವಾಸವಾಗಿದ್ದರು. ಉತ್ತರ ಪ್ರದೇಶದ ಲಖನೌನ ಗೋದಾಮಿನಲ್ಲಿ 606 ಬ್ಯಾಗ್​​ಗಳಲ್ಲಿ ಮೆಥಾಂಫೆಟಮೈನ್ ಡ್ರಗ್ಸ್ ಇತ್ತು. ಇಷ್ಟು ಬೃಹತ್​ ಪ್ರಮಾಣದಲ್ಲಿ ಮೆಥಾಂಫೆಟಮೈನ್ ಸಂಗ್ರಹ ಆಗಿದ್ದರ ಉದಾಹರಣೆ ದೇಶದಲ್ಲಿ ಇನ್ನೊಂದಿಲ್ಲ ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಅಂದಹಾಗೇ, ಈ ಮೆಥಾಂಫೆಟಮೈನ್ ಎಂಬುದು ಜಗತ್ತಿನ ಅತ್ಯಂತ ದುಬಾರಿ ಮಾದಕ ವಸ್ತು. ಅನೇಕರು ಇದಕ್ಕೆ ಅಡಿಕ್ಟ್​ ಆಗಿದ್ದಾರೆ. ಹಾಗೇ, ಅತ್ಯಂತ ಅಪಾಯಕಾರಿ ಡ್ರಗ್ಸ್​ ಕೂಡ ಹೌದು. ಇದು ಮನುಷ್ಯದ ಇಡೀ ದೇಹದ ಕೇಂದ್ರ ನರಮಂಡಲ ವ್ಯವಸ್ಥೆಯನ್ನೇ ಹಾಳು ಮಾಡುತ್ತದೆ. ಇದು ನಿಷೇಧಿತವಾಗಿದ್ದರೂ ಅಕ್ರಮವಾಗಿ ಬಳಕೆ ಮಾಡುವವರು ಇದ್ದೇ ಇದ್ದಾರೆ. ಇತ್ತೀಚೆಗೆ ಮೃತಪಟ್ಟ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್​ ಸಾವಿಗೂ ಮುನ್ನ ಇದೇ ದ್ರವ್ಯ ಸೇವಿಸಿದ್ದು ದೃಢಪಟ್ಟಿತ್ತು. ವಿದೇಶಿ ಮಾರುಕಟ್ಟೆಯಲ್ಲಿ ಮೆಥಾಂಫೆಟಮೈನ್ ಒಂದು ಗ್ರಾಂ. ಗೆ 30 ಸಾವಿರ ರೂಪಾಯಿ ಬೆಲೆಯಿದೆ.

ಸೆಪ್ಟೆಂಬರ್​ 4ರಂದು ದೆಹಲಿ ಪೊಲೀಸ್ ಕ್ರೈಂ ಬ್ರ್ಯಾಂಚ್​​ ಮತ್ತು ಗುಜರಾತ್​ ಆ್ಯಂಟಿ ಟೆರರ್​ ಸ್ಕ್ವಾಡ್​ ಜಂಟಿಯಾಗಿ ಒಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಬೇಧಿಸಿದ್ದರು. ದೆಹಲಿಯ ವಸಂತ್​ ಕುಂಜ್​ ಏರಿಯಾದಲ್ಲಿ ಅಫ್ಘಾನ್​ ಪ್ರಜೆಯೊಬ್ಬನನ್ನು ಬಂಧಿಸಿ, ಆತನಿಂದ 20 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಬಂಧನ; 14 ಕೆಜಿ ಹೆರಾಯಿನ್‌ ಜಪ್ತಿ

Exit mobile version