ನವ ದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನೀಡಿದ್ದ ಒಂದು ಹೇಳಿಕೆಗೆ ಸ್ಪಷ್ಟನೆ ಕೇಳಿ ದೆಹಲಿ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದಾರೆ. ರಾಹುಲ್ ಗಾಂಧಿಯವರು ಜನವರಿಯಲ್ಲಿ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ ಸಂದರ್ಭ ಮಾತನಾಡಿ ‘ಮಹಿಳೆಯರು ಈಗಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದ್ದರು. ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ದೆಹಲಿ ಪೊಲೀಸರು ಸ್ವಯಂಪ್ರೇರಿತರಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ‘ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದೀರಿ. ನಿಮಗೆ ಗೊತ್ತಿರುವ ಸಂತ್ರಸ್ತೆಯರ ಬಗ್ಗೆ ನಮಗೆ ಮಾಹಿತಿ ಕೊಟ್ಟರೆ, ಖಂಡಿತ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಹುಲ್ ಗಾಂಧಿಯವರಿಗೆ ಕಳಿಸಿದ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಅನುಭವವನ್ನು ಶ್ರೀನಗರದಲ್ಲಿ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ‘ನಾನು ಪಾದಯಾತ್ರೆ ನಡೆಸುತ್ತಿದ್ದಾಗ ಅನೇಕ ಮಹಿಳೆಯರು ನನ್ನ ಬಳಿ ಬಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಬಗ್ಗೆ ನನಗೆ ತಿಳಿಸಿದ್ದಾರೆ. ಒಬ್ಬಳು ಹುಡುಗಿ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಹೇಳಿದಳು. ಪೊಲೀಸರಿಗೆ ದೂರು ಕೊಟ್ಟಿಲ್ಲವಾ ಎಂದು ಕೇಳಿದ್ದಕ್ಕೆ, ಇಲ್ಲ ಮರ್ಯಾದಿಗೆ ಅಂಜಿ ಪೊಲೀಸರಿಗೆ ದೂರು ಕೊಟ್ಟಿಲ್ಲ ಎಂದಳು. ಹೀಗೆ ಅನೇಕ ಮಹಿಳೆಯರು ತಮ್ಮ ಮಾನ ಹೋಗುತ್ತದೆ ಎಂದೇ ಸುಮ್ಮನಿದ್ದಾರೆ ಎಂದು ಹೇಳಿದ್ದರು. ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿತ್ತು. ಆ ಸಂತ್ರಸ್ತರ ಬಗ್ಗೆ ಮಾಹಿತಿ ಕೊಡಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ‘ಅದಾನಿ ಮತ್ತು ಪ್ರಧಾನಿ ನಡುವಿನ ಸಂಬಂಧದ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಕ್ಕೆ, ಸರ್ಕಾರ ಈಗ ಪೊಲೀಸರ ಎದುರು ಅಡಗಿಕೊಂಡಿದೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಸಂಕಷ್ಟ ಹೇಳಿಕೊಂಡ ಮಹಿಳೆಯರ ಬಗ್ಗೆ ಈಗ ವಿವರ ಕೇಳುತ್ತಿದ್ದಾರೆ. ನಾವು ಉತ್ತರಿಸುತ್ತೇವೆ’ ಎಂದು ಹೇಳಿದೆ. ನಾವೂ ಕಾನೂನು ಪ್ರಕಾರ ಮುಂದುವರಿಯುತ್ತೇವೆ ಎಂದು ಹೇಳಿದೆ.