ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi Rain) ಸೇರಿ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ದೆಹಲಿಯಲ್ಲಿ ಕೆಲ ದಿನಗಳಿಂದಲೂ ಮಳೆಯಾಗುತ್ತಿದ್ದು, ಇಂದು ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಬಿಹಾರ, ಜಾರ್ಖಂಡ್‌ಗಳಲ್ಲೂ ಮಳೆಯಾಗಬಹುದು. ದೆಹಲಿಯಲ್ಲಿಂದು ಕನಿಷ್ಠ ಉಷ್ಣತೆ 19 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ಉಷ್ಣತೆ 34 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದೂ ಐಎಂಡಿ ತಿಳಿಸಿದೆ.
ಸೋಮವಾರವಂತೂ ದೆಹಲಿಯಲ್ಲಿ ಭಾರಿ ಮಳೆಯಾಗಿದೆ. ಗಾಳಿಯ ವೇಗ ಸುಮಾರು ತಾಸಿಗೆ 75 ಕಿಮೀ ಇತ್ತು. ಹಲವು ಕಡೆಗಳಲ್ಲಿ ಮರಗಳು ಮುರಿದುಬಿದ್ದಿವೆ. ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿತ್ತು. ದೆಹಲಿಯಲ್ಲಷ್ಟೇ ಅಲ್ಲದೆ, ಫರಿದಾಬಾದ್, ಗುರ್‌ಗಾಂವ್, ನೊಯ್ಡಾಗಳಲ್ಲಿಯೂ ಭಾರಿ ಮಳೆಯಿಂದ ಅವಾಂತರ ಉಂಟಾಗಿತ್ತು. ದೆಹಲಿ ಏರ್‌ಪೋರ್ಟ್‌ನಲ್ಲಿ ಮಳೆಯಿಂದ ಅವ್ಯವಸ್ಥೆ ಉಂಟಾಗಿ, 100ಕ್ಕೂ ಹೆಚ್ಚು ವಿಮಾನಗಳು ವಿಳಂಬವಾದವು. ಒಂದಷ್ಟು ವಿಮಾನಗಳಂತೂ ರದ್ದುಗೊಂಡಿವೆ. ಗುರ್‌ಗಾಂವ್‌ನಲ್ಲಿ ವಿಪರೀತ ಟ್ರಾಫಿಕ್ ಉಂಟಾಗಿ, ಸಂಚಾರ ಸುಗಮ ಮಾಡಲು 2500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: Explainer : QUAD summit 2022- ಚೀನಾಗೆ ಮಗ್ಗುಲ ಮುಳ್ಳಾಗುತ್ತಿರುವ ʼಕ್ವಾಡ್’, ಮೋದಿ ಉಪಸ್ಥಿತಿ
ಇಂದು ಗುಜರಾತ್‌ನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಆದರೆ ಮಳೆಯಾಗುವ ಸಾಧ್ಯತೆ ಇಲ್ಲ. ಅಹ್ಮದಾಬಾದ್‌ನಲ್ಲಿ ಕನಿಷ್ಠ ಉಷ್ಣತೆ 29ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ಉಷ್ಣತೆ 41 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಡೆಹ್ರಾಡೂನ್, ಉತ್ತರಾಖಂಡ್‌ಗಳಲ್ಲಿ ಇಂದು ಮಳೆಯಾಗಲಿದೆ. ಅತ್ಯಂತ ಉಷ್ಣಾಂಶದಿಂದ ಕಂಗೆಟ್ಟಿರುವ ರಾಜಸ್ಥಾನದಲ್ಲಿ ಇಂದು ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ತಲುಪಬಹುದು. ಈ ಮೂಲಕ ಬಿಸಿಲಿನ ತೀವ್ರತೆ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: ನೈಋತ್ಯ ಮುಂಗಾರು ಅಂಡಮಾನ್ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ