Site icon Vistara News

Delhi Rain: ಮಳೆ ಪ್ರವಾಹದಲ್ಲಿ ಮುಳುಗುತ್ತಿದೆ ಉತ್ತರ ಭಾರತ; ಕಾಶ್ಮೀರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಯೋಧರು

Delhi Rain

ದೇಶದಲ್ಲಿ ದಕ್ಷಿಣ ಭಾಗದಲ್ಲಿ ಮಳೆ ಕೊರತೆ (Rain News) ಇನ್ನೂ ಕಾಡುತ್ತಿದೆ. ಅತ್ತ ಉತ್ತರ ಭಾಗ ಮತ್ತು ವಾಯುವ್ಯ ಭಾಗದಲ್ಲಿರುವ ರಾಜ್ಯಗಳಲ್ಲಿ ವರುಣ ರುದ್ರಾವತಾರ ತಾಳಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 153 ಎಂಎಂ ಮಳೆಯಾಗಿದ್ದು (Delhi Rain), 41 ವರ್ಷದ ನಂತರ ಇಷ್ಟು ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. 1982ರ ಜುಲೈನಲ್ಲಿ ಒಮ್ಮೆ ಭಯಂಕರ ಮಳೆಯಾಗಿತ್ತು. ಅದರಿಂದೀಚೆಗೆ 150ಎಂಎಂ ಗಡಿ ದಾಟಿರಲಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗೇ ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಇಂದು ಕೂಡ ವಿಪರೀತ ಗಾಳಿ-ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಎಲ್ಲಿ ನೋಡಿದರೂ ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್ ಆಗಿದೆ. ಅಂಡರ್​ಪಾಸ್​ಗಳಲ್ಲೆಲ್ಲ ನೀರು ನಿಂತಿದೆ. ಮನೆ, ಮಾರುಕಟ್ಟೆ, ಆಸ್ಪತ್ರೆಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಇಂದು ಭಾನುವಾರದ ರಜಾ ಇಲ್ಲದಂತಾಗಿದೆ. ಸಚಿವರೂ ಕೂಡ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಯಾರೂ ರಜಾ ತೆಗೆದುಕೊಳ್ಳುವಂತಿಲ್ಲ. ಸಚಿವರೂ ಕಡ್ಡಾಯವಾಗಿ ಫೀಲ್ಡಿಗೆ ಇಳಿಯಬೇಕು. ಜನಸಾಮಾನ್ಯರ ನೆರವಿಗೆ ಸಿದ್ಧರಾಗಿರಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಐವರ ಸಾವು

ಹಿಮಾಚಲ ಪ್ರದೇಶದಲ್ಲಿ ಭಯಂಕ ಮಳೆಯಾಗುತ್ತಿದೆ. 24ಗಂಟೆಯಲ್ಲಿ ಮಳೆ ಸಂಬಂಧಿ ಅವಘಡಗಳಿಂದ 5 ಮಂದಿ ಪ್ರಾಣ ಹೋಗಿದೆ. ಮೂರು ಸಾವು ಶಿಮ್ಲಾದಲ್ಲೇ ಆಗಿದ್ದರೆ, ಕುಲ್ಲುವಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕುಲ್ಲು ಬಸ್​ಸ್ಟ್ಯಾಂಡ್ ಬಳಿಯ ಕಾಲುವೆಯೊಂದರಲ್ಲಿ ನೀರು ಪ್ರವಾಹದೋಪಾದಿಯಲ್ಲಿ ಹರಿಯುತ್ತಿದೆ. ಹಿಮಾಚಲ ಪ್ರದೇಶದ ಪ್ರಮುಖ ನದಿಯಾದ ಬಿಯಾಸ್​ ಅಪಾಯ ಮಟ್ಟವನ್ನೂ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 3ರ ಒಂದು ಭಾಗವನ್ನೂ ಕೊರೆದುಕೊಂಡು ಹೋಗುತ್ತಿದೆ. ಈ ನದಿ ತೀರದಲ್ಲಿ ಇರುವ ಕಂಗ್ರಾ, ಮಂಡಿ ಮತ್ತು ಶಿಮ್ಲಾಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (SDRF- NDRF) ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಕೋಟಿ ಮತ್ತು ಸನ್ವಾರಾ ರೈಲ್ವೆ ಸ್ಟೇಶನ್​ಗಳ ಮಧ್ಯೆ ಇರುವ ರೈಲ್ವೆ ಹಳಿ ಮೇಲೆ ಮಣ್ಣು, ಮರ ಕುಸಿದುಬಿದ್ದು ಮಾರ್ಗ ಬಂದ್​ ಆಗಿದೆ. ಇದರಿಂದಾಗಿ ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗದ ರೈಲು ಸಂಚಾರಕ್ಕೆ ತೊಡಕಾಗಿದೆ. ಹಿಮಾಚಲ ಪ್ರದೇಶದ ಒಟ್ಟು ಏಳು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಸಿಕ್ಕಾಪಟೆ ಮಳೆಯಾಗುವ ಮುನ್ಸೂಚನೆ ನೀಡಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಹೇಳಿದೆ. ಶನಿವಾರ ಬೆಳಗ್ಗೆ ಸೋಲನ್ ಜಿಲ್ಲೆಯ ಕಸೌಲಿ ಎಂಬಲ್ಲಿ ಭೂಕುಸಿತವಾಗಿದೆ. ಇದರಿಂದಾಗಿ ನಿರ್ಮಾಣ ಹಂತದಲ್ಲಿದ್ದ ಒಟ್ಟು ಆರು ಮನೆಗಳಿಗೆ ಹಾನಿಯಾಗಿದೆ.

ಇನ್ನು ಜಮ್ಮು-ಕಾಶ್ಮೀರ, ಪಂಜಾಬ್, ಚಂಡಿಗಢ್​, ಹರ್ಯಾಣ, ರಾಜಸ್ಥಾನಗಳಲ್ಲೂ ಮಳೆರಾಯ ಎಡೆಬಿಡದೆ ಸುರಿಯುತ್ತಿದ್ದಾನೆ. ಜಮ್ಮು-ಕಾಶ್ಮೀರದಲ್ಲಿ ವಿಪರೀತ ಮಳೆಯಿಂದಾಗಿ ಅಮರನಾಥ ಯಾತ್ರೆ ಶನಿವಾರ ಸ್ಥಗಿತಗೊಂಡಿದೆ. ಈ ದೇಗುಲಕ್ಕೆ ಹೋಗುವ ರಸ್ತೆ ಕುಸಿದು ಬಿದ್ದಿದೆ. ಜುಲೈ 1ರಿಂದ ಯಾತ್ರೆ ಶುರುವಾಗಿತ್ತು, ಆಗಸ್ಟ್​ 31ರವರೆಗೆ ಇತ್ತು. ಸದ್ಯ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇಂದು ಕೂಡ ಯಾತ್ರೆ ಮುಂದುವರಿಯುತ್ತಿಲ್ಲ. ಜಮ್ಮು-ಕಾಶ್ಮೀರದ ಪೂಂಚ್​​ನಲ್ಲಿರುವ ಪೋಶಾನಾ ನದಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.

ಪಂಜಾಬ್​, ಚಂಡಿಗಢ್​ ಮತ್ತು ಹರ್ಯಾಣದಲ್ಲೂ ಮಳೆ ಮಿತಿಮೀರಿದೆ. ಹಲವು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಕಷ್ಟಪಡುತ್ತಿದ್ದಾರೆ. ರಾಜಸ್ಥಾನದಲ್ಲಿ ಕಳೆದ 24ಗಂಟೆಯಲ್ಲಿ ಮಳೆ ಸಂಬಂಧಿತ ಅವಘಡಗಳಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಹಾಗೇ, ಛತ್ತೀಸ್​ಗಢ್​​ನಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನದಿ ನೀರಲ್ಲಿ ಮುಳುಗಿ, ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

Exit mobile version