ದಿಲ್ಲಿ: 2020 ದಿಲ್ಲಿ ದಂಗೆ (Delhi Riots) ಆರೋಪಿ ಶಾರ್ಜೀಲ್ ಇಮಾಮ್ ಅವರ ಜಾಮೀನು ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಆರು ವಾರಗಳ ಕಾಲ ಮುಂದೂಡಿದೆ. ಶಾರ್ಜೀಲ್ ಪರ ವಕೀಲರು ಮಾಡಿಕೊಂಡ ಮನವಿಯನ್ನು ದಿಲ್ಲಿ ಹೈಕೋರ್ಟ್ ಪುರಸ್ಕರಿಸಿದೆ. ಇದೇ ವೇಳೆ, ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಉಮರ್ ಖಾಲಿದ್ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಜಸ್ಟೀಸ್ ಸಿದ್ಧಾರ್ಥ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರಿದ್ದ ಪೀಠವು ಶಾರ್ಜೀಲ್ ಹಾಗೂ ಉಮರ್ ಖಾಲಿದ್ ಅವರ ಅರ್ಜಿಗಳ ವಿಚಾರಣೆ ನಡೆಸಿತು. ವಿಚಾರಣೆಯನ್ನು ಮುಂದೂಡುವಂತೆ ಶಾರ್ಜೀಲ್ ಅವರ ವಕೀಲರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ನಿಗದಿಪಡಿಸಿತು.
ಸಿಎಎ ವಿರೋಧಿಸಿ 2020ರಲ್ಲಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದವು. ಅದೇ ರೀತಿ ದಿಲ್ಲಿಯಲ್ಲೂ ಪ್ರತಿಭಟನೆಗಳು ನಡೆದಿದ್ದವು. ಇದೇ ವೇಳೆ, ಈಶಾನ್ಯ ದಿಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ದಂಗೆ ಸಂಭವಿಸಿತು. ಈ ದಂಗೆಗೆ ವಿದ್ಯಾರ್ಥಿ ನಾಯಕರಾಗಿದ್ದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪಿತೂರಿ ನಡೆಸಿದ್ದಾರೆಂಬ ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಅಂದಿನಿಂದಲೂ ಇವರು ಜೈಲಿನಲ್ಲಿದ್ದಾರೆ.
ಇದನ್ನೂ ಓದಿ | Cyberterrorism Conviction | ಟೆಕಿಯ ಸೈಬರ್ ಭಯೋತ್ಪಾದನೆ ಸಾಬೀತು, ಇದು ದೇಶದ ಮೊದಲ ಪ್ರಕರಣ!