Site icon Vistara News

Viral Video: ತಾಜ್​ಮಹಲ್​, ಕುತುಬ್​ ಮಿನಾರ್​ಗಳನ್ನು ನೆಲಸಮಗೊಳಿಸಿ, ಷಹಜಹಾನ್​​ ಪ್ರೀತಿಯನ್ನು ತನಿಖೆ ಮಾಡಿ; ಬಿಜೆಪಿ ಶಾಸಕನ ಆಗ್ರಹ

Demolish Taj Mahal Say Assam BJP MLA Rupjyoti Kurmi

#image_title

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯು 12ನೇ ತರಗತಿಯ ಪಠ್ಯದಿಂದ ಮೊಘಲ್ ಇತಿಹಾಸಕ್ಕೆ ಸಂಬಂಧಪಟ್ಟ ಕೆಲವು ಅಧ್ಯಾಯಗಳನ್ನು ಕೈಬಿಟ್ಟಿರುವ ಬೆನ್ನಲ್ಲೇ ಅಸ್ಸಾಂ ಬಿಜೆಪಿ ಶಾಸಕ ರುಪ್​ಜ್ಯೋತಿ ಕುರ್ಮಿ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಾಜ್​ ಮಹಲ್ ಮತ್ತು ಕುತುಬ್​ ಮಿನಾರ್​ಗಳನ್ನು ಧ್ವಂಸ ಮಾಡಬೇಕು. ಆ ಸ್ಥಳದಲ್ಲಿ ದೇವಸ್ಥಾನಗಳನ್ನು ಕಟ್ಟಬೇಕು ಎಂದು ಅವರು ಹೇಳಿರುವ ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಮೊಘಲ್​ ದೊರೆ ಷಹ ಜಹಾನ್​​ ನಿಜಕ್ಕೂ ತನ್ನ ಪತ್ನಿ ಮುಮ್ತಾಜ್​​ಳನ್ನು ಅಷ್ಟೊಂದು ಪ್ರೀತಿ ಮಾಡುತ್ತಿದ್ದನಾ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದೂ ಆಗ್ರಹಿಸಿದ್ದಾರೆ.

‘ತಾಜ್​ ಮಹಲ್​ ಮತ್ತು ಕುತುಬ್​ ಮಿನಾರ್​ಗಳನ್ನು ನೆಲಸಮ ಮಾಡಿ, ಅಲ್ಲಿ ವಿಶ್ವದಲ್ಲೇ ಅತ್ಯಂತ ಸುಂದರ ಎನ್ನಿಸುವ ದೇವಸ್ಥಾನಗಳನ್ನು ಕಟ್ಟಬೇಕು ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ. ಹೀಗೆ ದೇಗುಲಗಳನ್ನು ಕಟ್ಟಲು ನಾನು ಇಡೀ ವರ್ಷದ ನನ್ನ ವೇತನವನ್ನೂ ನೀಡುತ್ತೇನೆ’ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

1526ನೇ ಇಸ್ವಿಯಲ್ಲಿ ಮೊಘಲರು ಭಾರತಕ್ಕೆ ಬಂದರು. ಬಳಿಕ ಷಹಜಹಾನ್​ ತನ್ನ ಪತ್ನಿ ನೆನಪಿಗಾಗಿ ತಾಜ್​ ಮಹಲ್​ ನಿರ್ಮಿಸಿದ. ಅದಕ್ಕಾಗಿ ಅವನು ವ್ಯಯಿಸಿದ್ದು ಹಿಂದು ರಾಜರಿಂದ ಸುಲಿಗೆ ಮಾಡಿದ ಹಣವನ್ನು. ಈ ದೇಶದ ಜನರ ಹಣವನ್ನು. ಅದೂ ಷಹಜಹಾನ್​ ರಾಜ ತಾಜ್​ಮಹಲ್ ಕಟ್ಟಿದ್ದು ತನ್ನ ನಾಲ್ಕನೇ ಹೆಂಡತಿ ಮುಮ್ತಾಜ್​​ಗಾಗಿ. ಅವನು ಏಳು ಮದುವೆಯಾದವ. ನಿಜಕ್ಕೂ ಮುಮ್ತಾಜ್​​ಳನ್ನು ಅಷ್ಟು ಪ್ರೀತಿಸುತ್ತಿದ್ದುದೇ ಹೌದಾಗಿದ್ದರೆ, ಅವಳಾದ ಮೇಲೆ ಮತ್ಯಾಕೆ ಮೂರು ಮದುವೆಯಾದ. ಹೀಗಾಗಿ ಅವನು ನಿಜಕ್ಕೂ ಮುಮ್ತಾಜ್​ಳನ್ನು ಪ್ರೀತಿಸುತ್ತಿದ್ದನಾ, ಇಲ್ಲವಾ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಈಗಾಗಲೇ 12 ನೇ ತರಗತಿ ಪಠ್ಯದಲ್ಲಿ ಇದ್ದ, “ಥೀಮ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ-ಪಾರ್ಟ್‌ 2” ಪುಸ್ತಕದಿಂದ ಕಿಂಗ್ಸ್‌ ಆ್ಯಂಡ್‌; ದಿ ಮೊಘಲ್‌ ಕೋರ್ಟ್ಸ್‌ (ಸಿ 16 ಹಾಗೂ 17ನೇ ಶತಮಾನಗಳು) ಎಂಬ ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಿದೆ. ಇದೀಗ ಬಿಜೆಪಿ ಶಾಸಕರು, ಮೊಘಲರ ಕಾಲದ ಸ್ಮಾರಕಗಳನ್ನೂ ಕಿತ್ತೆಸೆಯುವಂತೆ ಆಗ್ರಹಿಸಿದ್ದಾರೆ.

Exit mobile version