Site icon Vistara News

ಸಂಸತ್‌ ಭವನದ ಎದುರು ಪ್ರತಿಭಟನೆಗಿಲ್ಲ ಅವಕಾಶ; ಮತ್ತೆ ಟೀಕೆಗೆ ಗುರಿಯಾದ ಕೇಂದ್ರ ಸರ್ಕಾರ

Parliament

ನವ ದೆಹಲಿ: ಸಂಸತ್‌ ಕಲಾಪದ ವೇಳೆ ಅಸಂಸದೀಯ ಶಬ್ದಗಳನ್ನು ಬಳಸುವಂತಿಲ್ಲ ಎಂದು ಜುಲೈ 14ರಂದು ಲೋಕಸಭಾ ಕಾರ್ಯಾಲಯ ಒಂದು ಸೂಚನೆಯನ್ನು ಬಿಡುಗಡೆ ಮಾಡಿತ್ತು. ಹಾಗೇ, ಯಾವೆಲ್ಲ ಪದಗಳ ಬಳಕೆ ಮಾಡಬಾರದು ಎಂಬ ಪಟ್ಟಿಯನ್ನೂ ನೀಡಿತ್ತು. ಇದು ಕಾಂಗ್ರೆಸ್‌ ಸೇರಿ ವಿವಿಧ ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು. ಅದರ ಬೆನ್ನಲ್ಲೇ ರಾಜ್ಯ ಸಭೆ ಕಾರ್ಯಾಲಯ ಇಂದು ಹೊಸ ಆದೇಶ ಹೊರಡಿಸಿದೆ. ʼಸಂಸತ್‌ ಭವನ (Parliament House) ದ ಆವರಣದಲ್ಲಿ ಇನ್ನು ಮುಂದೆ ಧರಣಿ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮತ್ತು ಧಾರ್ಮಿಕ ಸಮಾರಂಭಗಳನ್ನು ನಡೆಸುವಂತಿಲ್ಲʼ ಎಂದು ಸುತ್ತೋಲೆ ಬಿಡುಗಡೆ ಮಾಡಿದೆ. ಜುಲೈ 18ರಿಂದ ಸಂಸತ್‌ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿರುವ ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಡಿ, ಈ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಸತ್ತಿನ ಎಲ್ಲ ಸದಸ್ಯರೂ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.

ಪ್ರತಿಪಕ್ಷಗಳ ಪ್ರತಿಕ್ರಿಯೆ
ಇನ್ನೂ ಈ ಸುತ್ತೋಲೆಯನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌, ʼವಿಶ್ವಗುರುವಿನ ಹೊಸ ಆದೇಶ ಇದು. D(h)arna Mana Hai ಎಂದು ಟೀಕಿಸಿದ್ದಾರೆ. ಅಂದರೆ ಇಲ್ಲಿ ಧರಣಿ ನಿಷೇಧ ಮತ್ತು ಹೀಗೆ ಧರಣಿ, ಪ್ರತಿಭಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಭಯ ಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಎರಡರ್ಥ ಬರುವಂತೆ ಟ್ವೀಟ್‌ ಮಾಡಿದ್ದಾರೆ.

ಇನ್ನು ರಾಜ್ಯಸಭೆಯ ಕಾರ್ಯಾಲಯದ ಹೊಸ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಎನ್‌ಸಿಪಿ ನಾಯಕ ಶರದ್‌ ಪವಾರ್‌, ʼಸಂಸತ್‌ ಆವರಣದಲ್ಲಿ ಪ್ರತಿಭಟನೆ, ಧರಣಿಗೆ ನಿರ್ಬಂಧ ಇಲ್ಲ ಎಂಬ ಹೇಳಿಕೆ ಲೋಕಸಭಾ ಸ್ಪೀಕರ್‌ರಿಂದ ಪಡೆದಿದ್ದೇವೆ. ಈ ಬಗ್ಗೆ ನಾಳೆ ದೆಹಲಿಯಲ್ಲಿ ನಾವು ಪ್ರತಿಪಕ್ಷದವರೆಲ್ಲ ಸೇರಿ ಸಭೆ ನಡೆಸಿ ಚರ್ಚಿಸುತ್ತೇವೆ ಎಂದಿದ್ದಾರೆ. ಇನ್ನೊಂದೆಡೆ ಸಿಪಿಐ-ಎಂ ನಾಯಕ ಸೀತಾರಾಮ್‌ ಯೆಚೂರಿ ಟ್ವೀಟ್‌ ಮಾಡಿ, ʼಇದೆಂಥಾ ತಮಾಷೆ..! ಇಂಥ ಆದೇಶಗಳ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಲಾಗುತ್ತಿದೆ. ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ಮಾಡುವುದು ಸಂಸದರ ರಾಜಕೀಯ ಹಕ್ಕು. ಆದರೆ ಅದಕ್ಕೂ ಸರ್ಕಾರ ಭಯಬೀಳುತ್ತಿದೆ. ಇದೊಂದು ಬಹುದೊಡ್ಡ ಹೇಡಿ ಸರ್ಕಾರʼ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸರ್ವಾಧಿಕಾರಿ, ಜುಮ್ಲಾ ಜೀವಿ ಶಬ್ದಗಳು ಅಸಂಸದೀಯ; ಸಂಸತ್‌ ಕಲಾಪದಲ್ಲಿ ಬಳಕೆ ನಿಷೇಧ

Exit mobile version