Site icon Vistara News

ಅನರ್ಹತೆಯಿಂದ ಪಾರಾಗಲು ಡೆಪ್ಯೂಟಿ ಸ್ಪೀಕರ್‌ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿದ್ದವರಿಗೆ ಹಿನ್ನಡೆ

Maharashtra rebels

ಮುಂಬೈ: ಬಂಡಾಯ ಎದ್ದಿರುವ ಶಾಸಕರಲ್ಲಿ ಏಕನಾಥ್‌ ಶಿಂಧೆ ಸೇರಿ ಒಟ್ಟು ೧೬ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಉದ್ಧವ್‌ ಠಾಕ್ರೆ ಬಣ ಮಹಾರಾಷ್ಟ್ರ ಡೆಪ್ಯೂಟಿ ಸ್ಪೀಕರ್‌ ನರಹರಿ ಜಿರ್ವಾಲ್‌ರಿಗೆ ಮನವಿ ಮಾಡಿತ್ತು. ಆದರೆ ತಾವು ಅನರ್ಹತೆ ಅಸ್ತ್ರದಿಂದ ಪಾರಾಗಲು ಏಕನಾಥ್‌ ಶಿಂಧೆ ಬಣದ ಶಾಸಕರು ಡೆಪ್ಯೂಟಿ ಸ್ಪೀಕರ್‌ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರು. ಆದರೆ ಅವರಿಗೀಗ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ಮಂಡಿಸಲ್ಪಟ್ಟಿದ್ದ ಅವಿಶ್ವಾಸ ನಿರ್ಣಯವನ್ನು ಡೆಪ್ಯೂಟಿ ಸ್ಪೀಕರ್‌ ನರಹರಿ ತಿರಸ್ಕರಿಸಿದ್ದಾರೆ. “ಅವಿಶ್ವಾಸ ಗೊತ್ತುವಳಿಯನ್ನು ನನ್ನ ಕಚೇರಿಗೆ ಬಂದು ಸಲ್ಲಿಸಲಾಗಿಲ್ಲ. ಹೀಗಾಗಿ ಇದಕ್ಕೆ ಮಾನ್ಯತೆ ಇಲ್ಲ” ಎಂದು ತಿಳಿಸಿದ್ದಾರೆ.

ಹಿಂದೊಮ್ಮೆ ಅರುಣಾಚಲ ಪ್ರದೇಶದಲ್ಲಿ ರಾಜಕೀಯ ಅಸ್ಥಿರತೆಯುಂಟಾಗಿ ಕೇಸ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. 2016ರಲ್ಲಿ ತೀರ್ಪು ಕೊಟ್ಟಿದ್ದ ಸುಪ್ರೀಂಕೋರ್ಟ್‌ “ಸ್ಪೀಕರ್‌ ಅಥವಾ ಡೆಪ್ಯೂಟಿ ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಅದು ಬಾಕಿಯಿದ್ದಾಗ ಆ ಅವಧಿಯಲ್ಲಿ ಅವರು ಯಾವುದೇ ಶಾಸಕರನ್ನು ಅನರ್ಹಗೊಳಿಸಲು ಅವಕಾಶವಿಲ್ಲ. ಯಾಕೆಂದರೆ ಅವರ ಸ್ಥಾನವೇ ಭದ್ರ ಇರುವುದಿಲ್ಲ. ಮೊದಲು ತಮಗೆ ಬಹುಮತ ಇದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ” ಎಂದು ಹೇಳಿತ್ತು. ಶಿವಸೇನೆ ಬಂಡಾಯ ಶಾಸಕರು ಇದೇ ತೀರ್ಪಿನ ಆಧಾರದ ಮೇಲೆ, ಡೆಪ್ಯೂಟಿ ಸ್ಪೀಕರ್‌ ವಿರುದ್ಧ ಬಲೆಹೆಣೆಯಲು ಮುಂದಾಗಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದೇನಾಗಬಹುದು? ಸದನದಲ್ಲಿ ಬಲಾಬಲ ಏನು?

ಹೀಗೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಶಿವಸೇನೆ ಶಾಸಕರು ಯಾರೊಬ್ಬರೂ ಡೆಪ್ಯೂಟಿ ಸ್ಪೀಕರ್‌ ಆಫೀಸಿಗೆ ಹೋಗಿ ಸಲ್ಲಿಸಿಲ್ಲ. ಬದಲಿಗೆ ಜೂ.೨೨ರ ಬೆಳಗ್ಗೆ ೧೧.೩೦ರ ಹೊತ್ತಿಗೆ ಒಂದು ಅನಾಮಧೇಯ ಇ-ಮೇಲ್‌ನಿಂದ ಕಳಿಸಿದ್ದಾರೆ. ಇದರಲ್ಲಿ ೩೪ ಶಾಸಕರ ಸಹಿಯೂ ಇದೆ. ಆದರೆ ಎಲ್ಲದಕ್ಕೂ ಒಂದು ಪದ್ಧತಿ ಎಂಬುದಿರುತ್ತದೆ. ಅದರ ಪ್ರಕಾರವೇ ಪ್ರಕ್ರಿಯೆಗಳು ನಡೆಯಬೇಕು ಎಂದು ಡೆಪ್ಯೂಟಿ ಸ್ಪೀಕರ್‌ ನರಹರಿ ಜಿರ್ವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: Video: ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಪ್ರತಿಭಟನೆ; ಶಿವಸೇನೆ ಬಂಡಾಯ ಶಾಸಕನ ಕಚೇರಿ ಧ್ವಂಸ

Exit mobile version