Site icon Vistara News

ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಹೊಡೆದಾಟ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

Kashi

ವಾರಾಣಸಿ: ಇಲ್ಲಿನ ಕಾಶಿ ವಿಶ್ವನಾಥ ದೇಗುಲದಲ್ಲಿ ಶನಿವಾರ ಸಂಜೆ ನಡೆಯುತ್ತಿದ್ದ ಸಪ್ತರ್ಷಿ ಆರತಿಯ ಹೊತ್ತಿನಲ್ಲಿ ದೇಗುಲದ ಗರ್ಭಗುಡಿಯಲ್ಲಿ ಇಬ್ಬರು ಭಕ್ತರು ಮತ್ತು ದೇವಾಲಯದ ಪರಿಚಾರಕರ ನಡುವೆ ದೊಡ್ಡ ಗಲಾಟೆ ನಡೆದಿದೆ. ಈ ಸಂಘರ್ಷದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿ, ವೈರಲ್‌ ಆಗಿವೆ. ಭಕ್ತರು ಮತ್ತು ಪರಿಚಾರಕರು ಪರಸ್ಪರ ಕುತ್ತಿಗೆ, ಕಾಲರ್‌ ಹಿಡಿದು ತಳ್ಳಾಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದೀಗ ಶ್ರಾವಣಮಾಸ ಆಗಿದ್ದರಿಂದ ಕಾಶಿ ವಿಶ್ವನಾಥ ದೇಗುಲದಲ್ಲಿ ಸಹಜವಾಗಿಯೇ ಭಕ್ತರು ಜಾಸ್ತಿ ಇರುತ್ತಾರೆ. ಗರ್ಭಗುಡಿಯ ಬಳಿ ದರ್ಶನಕ್ಕೆ ನೂಕು ನುಗ್ಗಲು ಉಂಟಾದಾಗ ಅವರನ್ನು ನಿಯಂತ್ರಿಸುವ ಪ್ರಯತ್ನವನ್ನು ದೇಗುಲದ ಆಡಳಿತದವರು ನಡೆಸುತ್ತಾರೆ. ಹಾಗೇ, ಶನಿವಾರವೂ ಕೂಡ ಗರ್ಭಗುಡಿಯಲ್ಲಿ ಜಾಸ್ತಿ ನೂಕುನುಗ್ಗಲು ಉಂಟಾಗಿ, ಭಕ್ತರನ್ನು ನಿಯಂತ್ರಿಸಲು ಹೋದಾಗ ಜಗಳ ನಡೆದಿದೆ. ಇವರ ಗಲಾಟೆ ಕೆಲ ಹೊತ್ತಿನಲ್ಲೇ ತಣ್ಣಗಾದರೂ, ದೇವಸ್ಥಾನದ ಪರಿಚಾರಕರು ಅದನ್ನು ಅಲ್ಲಿಗೇ ಬಿಡಲಿಲ್ಲ. ʼಭಕ್ತರು ಇಷ್ಟೆಲ್ಲ ಗಲಾಟೆ ಸೃಷ್ಟಿಸಿದರೂ ಅವರನ್ನು ನಿಯಂತ್ರಣ ಮಾಡಲು ಪೊಲೀಸರು ನಮಗೆ ಸಹಕಾರ ನೀಡಲಿಲ್ಲʼ ಎಂದು ಅವರು ದೇಗುಲ ಮಂಡಳಿಯ ಸಿಇಒಗೆ ದೂರು ಕೊಟ್ಟಿದ್ದಾರೆ. ಇತ್ತ ಭಕ್ತರು ಕೂಡ ಸ್ಥಳೀಯ ಠಾಣೆಗೆ ತೆರಳಿ, ದೇವಸ್ಥಾನದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದ್ದಾಗಿ ದೂರು ಕೊಟ್ಟಿದ್ದಾರೆ. ವಾರಾಣಸಿ ಮೂಲದ ಕೃಷ್ಣಾನಂದ ಎಂಬುವರು ಈಗ ದೇವಸ್ಥಾನದ ನಾಲ್ವರು ಪರಿಚಾರಕರು ಮತ್ತು ಪಿಆರ್‌ಒ ವಿರುದ್ಧ ಚೌಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೇಗುಲದಲ್ಲಿ ಸಪ್ತರ್ಷಿ ಆರತಿ ಸಮಯದಲ್ಲಿ ಗರ್ಭಗುಡಿಯನ್ನು ಮುಚ್ಚಿಡಲಾಗುತ್ತದೆ. ಹಾಗೇ, ಶನಿವಾರವೂ ಪರಿಚಾರಕರು ಅದನ್ನೇ ಮಾಡಿದ್ದರು. ಅಷ್ಟೇ ಹೊತ್ತಿಗೆ ಆಗಮಿಸಿದ ಇಬ್ಬರು ಭಕ್ತರು ತಮಗೆ ದೇವರ ದರ್ಶನಕ್ಕೆ ಈಗಲೇ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಅರ್ಚಕರು ಎಷ್ಟೇ ಹೇಳಿದರೂ ಅವರು ಕೇಳಲಿಲ್ಲ. ಆಗಲೇ ಈ ಹೊಡೆದಾಟ ಶುರುವಾಯಿತು. ಕೆಲವು ದಿನಗಳ ಹಿಂದೆ ದೇವಸ್ಥಾನದ ಸಿಬ್ಬಂದಿ ಮತ್ತು ಪೊಲೀಸರ ನಡುವೆ, ದೇವರ ದರ್ಶನದ ವಿಚಾರದಲ್ಲಿಯೇ ಗಲಾಟೆ ಆಗಿತ್ತು.

ಇದನ್ನೂ ಓದಿ: ಕಾಶಿಗೆ ಹೋಗಲು ಸರ್ಕಾರದಿಂದ 5,000 ರೂ. ಧನಸಹಾಯ: ಹಣ ಪಡೆಯುವ ಕುರಿತು ಮಾಹಿತಿ ಇಲ್ಲಿದೆ

Exit mobile version