ನವ ದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಒಂದು ‘ಜಾದು ಬಾಕ್ಸ್ (Jaadui Pitara-Magic Box)’ ಉದ್ಘಾಟನೆ ಮಾಡಿದ್ದಾರೆ. ಈ ಜಾದೂ ಬಾಕ್ಸ್ ಶಿಕ್ಷಣಕ್ಕೆ ಸಂಬಂಧಪಟ್ಟಿದ್ದಾಗಿದ್ದು, 3ರಿಂದ-8 ವರ್ಷದವರೆಗಿನ ಮಕ್ಕಳು ಆಟದೊಂದಿಗೆ ಪಾಠ ಕಲಿಯುವ ಸಲುವಾಗಿ ರೂಪಿಸಲಾಗಿರುವ ಪೆಟ್ಟಿಗೆ ಇದು. ಫೆ.20ರಂದು Jaadui Pitara ಲೋಕಾರ್ಪಣೆಗೊಳಿಸಿದ ಸಚಿವರು, ಮುಂಬರುವ ಶೈಕ್ಷಣಿಕ ವರ್ಷದಿಂದ ದೇಶಾದ್ಯಂತ 1200 ಕೇಂದ್ರ ಸರ್ಕಾರಿ ಶಾಲೆಗಳಲ್ಲಿ ಈ ಜಾದೂ ಬಾಕ್ಸ್ ಕಡ್ಡಾಯವಾಗಿ ಇರಲಿದೆ ಎಂದು ಘೋಷಿಸಿದರು.
‘ಇದೊಂದು ವಿನೂತನವಾದ ಜಾದೂ ಬಾಕ್ಸ್. ಮಕ್ಕಳನ್ನು ಕೇಂದ್ರೀಕರಿಸಿ ರೂಪಿಸಲಾದ ಶಿಕ್ಷಣ ಕಲೆ. ಪುಟ್ಟ ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸಿ, ಅವರನ್ನು ಸಿದ್ಧಗೊಳಿಸುವ ಸಲುವಾಗಿ ಈ ವಿನೂತನ ಪ್ರಯೋಗ ಮಾಡಲಾಗಿದೆ. 2020ರ ನೂತನ ಶಿಕ್ಷಣ ನೀತಿ (NEP)ಯ ಪ್ರಮುಖ ಶಿಫಾರಸ್ಸುಗಳಲ್ಲಿ ಇದೂ ಒಂದಾಗಿತ್ತು. ಅದನ್ನೀಗ ಪೂರೈಸಲಾಗಿದೆ’ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.
2020ರ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಡಿ 3-8ವರ್ಷದವರೆಗಿನ ಮಕ್ಕಳ ಕಲಿಕೆಗೆ ಪೂರಕವಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) 2022ರ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಮೂರರಿಂದ ಆರು ವರ್ಷದವರೆಗಿನ ವಯಸ್ಸಿನ ಮಕ್ಕಳ ಕಲಿಕೆಯಲ್ಲಿ ಯಾವುದೇ ಪಠ್ಯಪುಸ್ತಕಗಳು ಇರಬಾರದು. ಅವರಿಗೆ ಕಲಿಕೆಗೆ ಪೂರಕವಾದ ಆಟಿಕೆಗಳು, ಆಟಗಳು, ಪ್ರಾತ್ಯಕ್ಷಿಕೆಗಳು, ಅವರದ್ದೇ ಮಾತೃಭಾಷೆ, ಭಾರತದ ಮಹಾನ್ ನಾಯಕರ ಕಥೆಗಳ ಮೂಲಕವೇ ಪಾಠ ಮಾಡಬೇಕು. ವೈವಿದ್ಯತೆಯನ್ನು ಸಾರುವ ಪುಸ್ತಕಗಳ ಪರಿಚಯ ಅವರಿಗೆ ಮಾಡಬೇಕು. ಲಿಂಗ, ನೈತಿಕತೆ ಬಗ್ಗೆ ಅರಿವು ಮೂಡಿಸಬೇಕು. ಹಾಗೇ, ಮೌಲ್ಯಮಾಪನದ ಮತ್ತು ಅವಲೋಕನದ ಮೂಲಕ ಅವರ ಸೃಜನಶೀಲತೆ ವಿಶ್ಲೇಷಣೆ ಮಾಡಬೇಕು ಎಂಬಿತ್ಯಾದಿ ಮಹತ್ವದ ಅಂಶಗಳನ್ನು ಈ ಪಠ್ಯಕ್ರಮದಲ್ಲಿ ಉಲ್ಲೇಖ ಮಾಡಲಾಗಿದೆ. ಅದರಂತೆ ಈಗ ನರ್ಸರಿ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳ ಕಲಿಕೆಗಾಗಿ ‘ಜಾದೂ ಬಾಕ್ಸ್’ ಎಂಬ ಕಲಿಕಾ ಪೂರಕ ಆಟಿಕೆಯನ್ನು ಕೇಂದ್ರ ಸರ್ಕಾರ ಹೊರತಂದಿದೆ. ಹಾಗೇ, 1 ಮತ್ತು 2ನೇ ತರಗತಿಯವರಿಗಾಗಿ ಚಿತ್ರ ಸಹಿತದ ಪಾಠಗಳು ಇರುವ ಪಠ್ಯಗಳನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಇದನ್ನೂ ಓದಿ: NCF | 3-6 ವರ್ಷದ ಮಕ್ಕಳ ಕಲಿಕೆಗೆ ಪಠ್ಯಪುಸ್ತಕ ಅಗತ್ಯವಿಲ್ಲ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಉಲ್ಲೇಖ
ಏನಿದು ಜಾದೂ ಬಾಕ್ಸ್?
ಮಕ್ಕಳಿಗೆ ಸಾಮಾನ್ಯವಾಗಿ ಜಾದೂ (Magic)ಎಂಬುದು ಅತ್ಯಂತ ಕುತೂಹಲಕಾರಿ ಮತ್ತು ಆಸಕ್ತಿದಾಯಕ ವಿಷಯವಾಗಿರುತ್ತದೆ. ಹೀಗಾಗಿ ಅದೇ ಹೆಸರಿನಲ್ಲೇ ಒಂದು ಬಾಕ್ಸ್ನ್ನು ಅವರ ಕಲಿಕೆಗಾಗಿ ರೂಪಿಸಿಡಲಾಗಿದೆ. ಈ ಜಾದೂ ಬಾಕ್ಸ್ನಲ್ಲಿ ಆಟ, ವಿವಿಧ ಚಟುವಟಿಕೆಗಳ ಪುಸ್ತಕಗಳು, ವರ್ಕ್ಶೀಟ್ಗಳು, ವಿವಿಧ ಕಲಿಕಾ ಆಟಿಕೆಗಳು, ಕಥೆಗಳನ್ನು ಒಳಗೊಂಡ ಕಾರ್ಡ್ಗಳು, ಒಗಟುಗಳು, ಮಕ್ಕಳ ಮ್ಯಾಗ್ಜಿನ್ಗಳು, ಪೋಸ್ಟರ್ಗಳು, ಶಿಕ್ಷಕರು, ತರಬೇತಿದಾರರಿಗಾಗಿ ಹ್ಯಾಂಡ್ಬುಕ್ಗಳು, ಕೀಲುಗೊಂಬೆಗಳು ಸೇರಿ ಹಲವು ರೀತಿಯ, ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಸಾಮಗ್ರಿಗಳು ಇರಲಿವೆ. ಹೀಗೆ ವಿವಿಧ ಮಾದರಿಯ ಕಲಿಕಾ ವಸ್ತುಗಳು, ಸಾಮಗ್ರಿಗಳು ಇದ್ದು, ಮಕ್ಕಳನ್ನು ಆಕರ್ಷಿಸುವ ಬಾಕ್ಸ್ಗೆ ಜಾದೂ ಬಾಕ್ಸ್ ಎಂದು ಹೆಸರಿಡಲಾಗಿದೆ.
ಒಟ್ಟಾರೆ ಹೇಳಬೇಕು ಎಂದರೆ ಮಕ್ಕಳ ದೈಹಿಕ, ಸಾಮಾಜಿಕ-ಭಾವನಾತ್ಮಕ, ನೈತಿಕ, ಭಾಷೆ ಮತ್ತು ಸಾಕ್ಷರತೆ, ಕಲಾತ್ಮಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ, ಅರಿವಿನ ಬೆಳವಣಿಗೆಗೆ ಪೂರಕವಾಗಿ ಈ ಜಾದೂ ಬಾಕ್ಸ್ ತಯಾರಾಗಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.