ನವದೆಹಲಿ: ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ವಿರುದ್ಧ ಶಾಸಕರ ಅಸಮಾಧಾನ ಮುಂದುವರಿದಿದೆ. ಮತ್ತೊಬ್ಬ ಬಿಜೆಪಿ ಶಾಸಕ ಪಿ, ಬ್ರೋಜೆನ್ ಸಿಂಗ್ ಅವರು ಸರ್ಕಾರದ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸಿಎಂ ಅವರಿಗೆ ಪತ್ರ ಬರೆದಿರುವ ಬ್ರೋಜೆನ್ ಸಿಂಗ್ ಅವರು, ವೈಯಕ್ತಿಕ ಕಾರಣಗಳಿಂದಾಗಿ ಮಣಿಪುರ ಅಭಿವೃದ್ಧಿ ಸೊಸೈಟಿ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಒಂದು ವಾರದಲ್ಲಿ ಬಿಜೆಪಿಯ ಮೂವರು ಶಾಸಕರು ತಮಗೆ ವಹಿಸಲಾದ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಮಣಿಪುರ ಬಿಜೆಪಿ ಘಟಕದಲ್ಲಿನ ಬೇಗುದಿ ಬೀದಿಗೆ ಬಂದಿದೆ.
ಏಪ್ರಿಲ್ 13ರಂದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಹೆರೋಕ್ ಶಾಸಕ ಥೋಕ್ಚೋಮ್ ರಾಧೆಶಾಮ್ ಸಿಂಗ್ ಅವರು ಮುಖ್ಯಮಂತ್ರಿ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ನಾಲ್ಕು ದಿನಗಳ ಬಳಿಕ ಲಾಂಗ್ತಬಲ್ ಕ್ಷೇತ್ರದ ಶಾಸಕ ಕರಮ್ ಶಾಮ್ ಅವರು ಮಣಿಪುರ ಟೂರಿಸಮ್ ಕಾರ್ಪೊರೇಷನ್ ಚೇರ್ಮನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇತ್ತೀಚೆಗೆ ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡ್‌ಗೆ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡಿದ್ದ ಬಿಜೆಪಿಯ ಶಾಸಕರ ತಂಡದಲ್ಲಿ ರಾಜೀನಾಮೆ ನೀಡಿರುವ ಮೂವರು ಇದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಮಣಿಪುರ ಬಿಜೆಪಿಗೆ ಸಂಬಂಧಿಸಿದಂತೆ ಪ್ರಮುಖ ಸಭೆ ನಡೆಯಲಿದೆ. ಮಣಿಪುರ ರಾಜ್ಯ ಉಸ್ತುವಾರಿಯೂ ಆಗಿರುವ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಅವರ ಸ್ವಜನಪಕ್ಷಪಾತ ವಿರುದ್ಧ ಶಾಸಕರು ತಿರುಗಿ ಬಿದ್ದಿದ್ದಾರೆ. ಮಣಿಪುರ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜಾಸತ್ತಾತ್ಮಕ ನಾಯಕತ್ವವನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಮಣಿಪುರದಲ್ಲಿ ಅದಕ್ಕೆ ಅವಕಾಶ ಇಲ್ಲದಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಶಾಸಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Nitish Kumar | ಮಣಿಪುರದಲ್ಲಿ ಬಿಜೆಪಿ ಜತೆ ಜೆಡಿಯು ವಿಲೀನ, ನಿತೀಶ್ ಕುಮಾರ್‌ಗೆ ಭಾರಿ ಹಿನ್ನಡೆ
ಸಿಎಂ ಅವರ ಅಳಿಯ ಆರ್ ಕೆ ಇಮೋ ಸಿಂಗ್ ಅವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಆದರೆ, ನಮ್ಮ ಕ್ಷೇತ್ರಗಳಲ್ಲಿ ಕೆಲಸವೇ ಆಗುತ್ತಿಲ್ಲ. ಸಿಎಂ ಆಯ್ದು ಕ್ಷೇತ್ರಗಳಲ್ಲಿ ಮಾತ್ರ ಅಭಿವೃದ್ಧಿ ಕೈಗೊಳ್ಳುತ್ತಿದ್ದಾರೆ. ಯಾಕೆ ತಾರತಮ್ಯ ಎಂದು ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ನಮ್ಮ ಬಳಿ ಇಲ್ಲ ಎಂದು ಶಾಸಕ ಹೇಳಿದ್ದಾರೆ.