Site icon Vistara News

ಈ ರಾಜ್ಯದಲ್ಲಿ ಏಳು ದಿನ ಟ್ರಾಫಿಕ್​ ನಿಯಮ ಉಲ್ಲಂಘನೆಗೆ ಇಲ್ಲ ದಂಡ; ಇದು ವಾಹನ ಸವಾರರಿಗೆ ದೀಪಾವಳಿ ಗಿಫ್ಟ್ ​​!

Gujarat Vehicle

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಗಾಗಿ ಗುಜರಾತ್​​ ಜನತೆಗೆ ಸರ್ಕಾರದ ಕಡೆಯಿಂದ ಒಂದು ಉಡುಗೊರೆ ಸಿಕ್ಕಿದೆ. ಅಂದಹಾಗೇ ಇದು ವಾಹನ ಮಾಲೀಕರು, ಸವಾರರಿಗೆ ಖುಷಿ ಕೊಡುವ ಗಿಫ್ಟ್​​..! ಗುಜರಾತ್​​ನಲ್ಲಿ ದೀಪಾವಳಿ ನಿಮಿತ್ತ ಅಕ್ಟೋಬರ್​ 21ರಿಂದ 27ರವರೆಗೆ ಯಾರೇ ಸಂಚಾರಿ ನಿಯಮ (ಟ್ರಾಫಿಕ್​ ರೂಲ್ಸ್​) ಉಲ್ಲಂಘನೆ ಮಾಡಿದರೂ ಅವರಿಗೆ ದಂಡ ವಿಧಿಸುವುದಿಲ್ಲ ಎಂದು ಅಲ್ಲಿನ ಗೃಹ ಇಲಾಖೆ ಸಹಾಯಕ ಸಚಿವ ಹರ್ಷ ಸಾಂಘ್ವಿ ಘೋಷಿಸಿದ್ದಾರೆ. ಹಾಗೇ, ಇದು ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​​ ಅವರ ಜನಪರ ನಿರ್ಧಾರ ಎಂದೂ ಅವರು ಹೇಳಿದ್ದಾರೆ.

‘ದೀಪಾವಳಿ ನಿಮಿತ್ತ 7 ದಿನ ಯಾರೇ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡಿದರೂ ಪೊಲೀಸರು ಅವರಿಗೆ ದಂಡ ವಿಧಿಸುವುದಿಲ್ಲ. ಅವರಿಗೆ ಒಂದು ಹೂವು ಕೊಟ್ಟು ಸಂಚಾರಿ ನಿಯಮಗಳ ಬಗ್ಗೆ ತಿಳಿಸಲಾಗುವುದು. ಇನ್ನೊಮ್ಮೆ ಇಂಥ ತಪ್ಪು ಮಾಡಬೇಡಿ ಎಂದು ಮನವೊಲಿಸಲಾಗುವುದು. ಹಾಗಂತ ಯಾರೂ ಟ್ರಾಫಿಕ್​ ನಿಯಮಗಳನ್ನು ಮರೆಯಬೇಡಿ, ಉಲ್ಲಂಘಿಸಬೇಡಿ. ದಂಡ ಇರಲಿ-ಬಿಡಲಿ ಜನರು ಕಾನೂನು ಮೀರಬೇಡಿ’ ಎಂದು ಸಚಿವರು ಹೇಳಿದ್ದಾರೆ.

ಗುಜರಾತ್​​ ರಾಜ್ಯ ಸರ್ಕಾರದ ಈ ಉಡುಗೊರೆಯಿಂದ ಅಲ್ಲಿನ ಜನರು ಫುಲ್​ ಖುಷಿಯಾಗಿದ್ದಾರೆ. ಬೇರೆ ರಾಜ್ಯದವರೂ ಟ್ವಿಟರ್​​ನಲ್ಲಿ ಈ ವಿಷಯ ಚರ್ಚೆ ಮಾಡುತ್ತಿದ್ದಾರೆ. ‘ಹೀಗೆ ಏಳು ದಿನ ದಂಡ ಇಲ್ಲ ಎನ್ನುವ ಮೂಲಕ ಜನರು ಸ್ವಯಂ ಇಚ್ಛೆಯಿಂದಲೇ ಟ್ರಾಫಿಕ್​ ನಿಯಮ ಪಾಲನೆ ಮಾಡಲು ಪ್ರೇರೇಪಿಸಲಾಗುತ್ತಿರುವುದು ಶ್ಲಾಘನೀಯ’ ಎಂದು ಅನೇಕರು ಹೇಳಿದ್ದಾರೆ. ಹಾಗೇ, ಇನ್ನೂ ಕೆಲವರು ಇದು ಒಳ್ಳೆಯ ಉಡುಗೊರೆಯಲ್ಲ. ನಮ್ಮ ಜನ ಅಷ್ಟೆಲ್ಲ ಪ್ರಾಮಾಣಿಕರು, ತಿಳುವಳಿಕಸ್ಥರು ಅಲ್ಲ. ಈ ಏಳು ದಿನದಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಬಹುದು’ ಎಂದು ಗುಜರಾತ್​ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನೂ ಮಾಡಿದ್ದಾರೆ.

ಇದನ್ನೂ ಓದಿ: Narendra Modi | ಗುಜರಾತ್‌ನಲ್ಲಿ ಮಕ್ಕಳ ಜತೆ ಬೆಂಚ್‌ ಮೇಲೆ ಕುಳಿತು ಪಾಠ ಆಲಿಸಿದ ಪ್ರಧಾನಿ ಮೋದಿ

Exit mobile version