ಚೆನ್ನೈ: ಹಲ್ಲೆಗೀಡಾದ 29 ವರ್ಷದ ಯೋಧನೊಬ್ಬರು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಳ್ಳಿಯಲ್ಲಿ ಮೃತಪಟ್ಟಿದ್ದಾರೆ(DMK Killed Soldier). ಮೃತ ಯೋಧ ಹಾಗೂ ಡಿಎಂಕೆ ಕೌನ್ಸಿಲರ್ (DMK Councillor) ಮಧ್ಯೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಗಳವಾಗಿತ್ತು. ಆಗ, ಡಿಎಂಕೆ ಕೌನ್ಸಿಲರ್ ಮತ್ತು ಸಹಚರರು, ಯೋಧ ಹಾಗೂ ಯೋಧನ ಸಹೋದರ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌನ್ಸಿಲರ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯೋಧನ ಹೆಸರು ಪ್ರಭು. ಇವರು ಜಮ್ಮು-ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿದ್ದರು. ರಜೆಗಾಗಿ ಊರಿಗೆ ಆಗಮಿಸಿದ್ದರು. ಆರೋಪಿ ಕೌನ್ಸಿಲರ್ ಆರ್. ಚಿನ್ನಸ್ವಾಮಿ ಎಂದು ಗುರುತಿಸಲಾಗಿದೆ. ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬಳಿ, ಮೃತ ಯೋಧ ಪ್ರಭು ಕುಟುಂಬದವರು ಬಟ್ಟೆ ತೊಳೆಯುತ್ತಿದ್ದರು. ಅನಾವಶ್ಯಕವಾಗಿ ನೀರು ಹಾಳ ಮಾಡಬೇಡಿ ಎಂದು ಕೌನ್ಸಿಲರ್ ಹೇಳಿದ್ದಾರೆ. ಆಗ ಯೋಧನ ಪತ್ನಿ ಕೌನ್ಸಿಲರ್ ಮಧ್ಯೆ ಜಗಳವಾಗಿದೆ. ಯೋಧ ಪ್ರಭು ಕೂಡ ವಾಗ್ವಾದಲ್ಲಿ ತೊಡಗಿಸಿಕೊಂಡು, ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಳಿಕ ಕೌನ್ಸಿಲರ್ ಚಿನ್ನಸ್ವಾಮಿ ಮತ್ತು ಆತನ ಪುತ್ರ ಹಾಗೂ ಕುಟುಂಬದವರು ಪ್ರಭು ಮನೆಗೆ ಹೋಗಿದೆ ಆತನ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಪ್ರಭು ಸಹೋದರ ಪ್ರಭಾಕರನ್ ಕೂಡ ಗಾಯಗೊಂಡಿದ್ದರು. ಈ ಪ್ರಭಾಕರನ್ ಕೂಡ ಸೇನೆಯಲ್ಲಿದ್ದಾರೆ. ಗಾಯಾಳು ಪ್ರಭುವನ್ನು ಹತ್ತಿರದ ಹೊಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭಾಕರನ್ ನೀಡಿದ ದೂರಿನ ಅನ್ವಯ ಕೃಷ್ಣಗಿರಿ ಪೊಲೀಸರು ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ಸೇರಿದಂತೆ 9 ಜನರನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. ಈ ಕುರಿತು ಡಿಎಂಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಏತನ್ಮಧ್ಯೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಈ ಘಟನೆಯನ್ನು ಕಂಡಿಸಿದ್ದು, ಯೋಧನಿಗೆ ತನ್ನ ಸ್ವಂತ ಊರಿನಲ್ಲೂ ರಕ್ಷಣೆ ಇಲ್ಲ. ಗೃಹ ಇಲಾಖೆಯನ್ನೂ ಹೊಂದಿರುವ ವಿಭಿನ್ನ ಮುಖ್ಯಮಂತ್ರಿಯನ್ನು ಜನರು ಗಮನಿಸುತ್ತಿದ್ದಾರೆಂದು ಡಿಎಂಕೆ ವಿರುದ್ಧ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: One Nation, One Election | ಒಂದು ರಾಷ್ಟ್ರ, ಒಂದು ಚುನಾವಣೆಗೆ ಡಿಎಂಕೆ ವಿರೋಧ, ಬೆಂಬಲಿಸಿದ ಎಐಎಡಿಎಂಕೆ ವಿರುದ್ಧ ಟೀಕೆ