ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರು ಒಂದಲ್ಲ ಒಂದು ವಿವಾದ ಸೃಷ್ಟಿಸುವುದು ಹೊಸದಲ್ಲ. ಹೊಡೆಯಿರಿ, ಬಡಿಯಿರಿ, ಕತ್ತರಿಸಿ ಎಂಬ ಮಾತುಗಳು ಟಿಎಂಸಿ ನಾಯಕರ ಬಾಯಲ್ಲಿ ಸ್ಫುರಿಸುತ್ತಲೇ ಇರುತ್ತವೆ. ಆದರೆ ಈಗ ಕಾಂಗ್ರೆಸ್ ನಾಯಕಿಯೊಬ್ಬರು ಅಂಥ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇವರು ಪೊಲೀಸರ ವಿರುದ್ಧವೇ ಕಾರ್ಯಕರ್ತರನ್ನು ಎತ್ತಿಕಟ್ಟಿದ್ದಾರೆ.
‘ಅಭಿಷೇಕ್ ಬ್ಯಾನರ್ಜಿ ಸೆಪ್ಟೆಂಬರ್ನಲ್ಲಿ ಮಾತನಾಡುತ್ತ, ಪ್ರತಿಭಟನೆ ಸಂದರ್ಭದಲ್ಲಿ ಯಾರು ಪೊಲೀಸ್ ವಾಹನಕ್ಕೆ ಬೆಂಕಿ ಇಡುವುದು, ಧ್ವಂಸ ಮಾಡುವುದು ಮಾಡುತ್ತಾರೋ, ಅಂಥವರ ತಲೆಗೆ ಗುಂಡು ಹೊಡೆಯಬೇಕು’ ಎಂದು ಹೇಳಿದ್ದರು. ಈಗ ಅದೇ ಮಾತುಗಳಿಗೆ ಕಾಂಗ್ರೆಸ್ ನಾಯಕಿ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಪೊಲೀಸರಿಗೆಲ್ಲ ಭಯಪಡಬೇಡಿ. ಅಗತ್ಯ ಬಿದ್ದರೆ ಅವರ ಮೇಲೆ ಬಾಂಬ್ ಹಾಕಿ. ಬುಲೆಟ್ಗಳಿಂದ ಪೊಲೀಸರ ದೇಹವನ್ನು ರಂಧ್ರ ಮಾಡಿ’ ಎಂದು ಕರೆ ನೀಡಿದ್ದಾರೆ.
ಅಂದಹಾಗೇ ಇಂಥ ಮಾತುಗಳನ್ನಾಡಿದವರು ಪಶ್ಚಿಮ ಬಂಗಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಭ್ರತಾ ದತ್ತಾ. ಶುಕ್ರವಾರ ಬಿರ್ಬುಮ್ನಲ್ಲಿ ನಡೆದ ಸಭೆಯಲ್ಲಿ ಮಾತಾನಡಿದ್ದ ಅವರು, ‘ಅಭಿಷೇಕ್ ಬ್ಯಾನರ್ಜಿ ಹೇಳುತ್ತಾರೆ, ಪೊಲೀಸರ ವಾಹನ ಮುಟ್ಟಿದವರ ಹಣೆಗೆ ಗುಂಡು ಹೊಡೆಯಬೇಕು ಎಂದು. ಆದರೆ ನಾನು ಪೊಲೀಸರ ಇಡೀ ದೇಹಕ್ಕೆ ಗುಂಡು ಹಾರಿಸಬಲ್ಲೆ. ಅವರ ದೇಹವನ್ನು ಗುಂಡುಗಳಿಂದ ರಂಧ್ರ ಮಾಡಬಲ್ಲೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ನೀವೂ ಹೀಗೆ ಮಾಡಿ’ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕಿಯ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ನಾಯಕ, ಸಚಿವ ಫಿರ್ಹಾದ್ ಹಕೀಮ್ ಖಂಡಿಸಿದ್ದಾರೆ. ಈ ವಿಡಿಯೊವನ್ನು ಪೊಲೀಸರ ಗಮನಕ್ಕೆ ತಂದು, ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವ ಫೋಟೋಗಳು ವೈರಲ್