Site icon Vistara News

ಶಿಂಧೆ ಬಣದ ಅರ್ಜಿ ಬಗ್ಗೆ ಈಗಲೇ ನಿರ್ಧಾರ ಬೇಡ ಎಂದು ಚುನಾವಣಾ ಆಯೋಗಕ್ಕೆ ಹೇಳಿದ ಸುಪ್ರೀಂಕೋರ್ಟ್

Supreme Court

ನವ ದೆಹಲಿ: ‘ನಮ್ಮ ಬಣದಲ್ಲಿಯೇ ಹೆಚ್ಚಿನ ಶಾಸಕರು/ಸಂಸದರು ಇದ್ದಾರೆ. ಹಾಗಾಗಿ ನಮ್ಮದೇ ನಿಜವಾದ ಶಿವಸೇನೆ ಎಂದು ಏಕನಾಥ್ ಶಿಂಧೆ ಪಾಳಯದವರು ಸಲ್ಲಿಸಿರುವ ಅರ್ಜಿ ಬಗ್ಗೆ ಈಗಲೇ ಏನೂ ನಿರ್ಧಾರ ಕೈಗೊಳ್ಳಬೇಡಿ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ಹೇಳಿದೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ ಎರಡು ಬಣಗಳಾಗಿದೆ. ಅದರಲ್ಲೊಂದು ಏಕನಾಥ ಶಿಂಧೆ ಬಣ, ಮತ್ತೊಂದು ಉದ್ಧವ್​ ಠಾಕ್ರೆ ಪಾಳಯ. ಇದೀಗ ಎರಡೂ ಬಣಗಳೂ ಶಿವಸೇನೆ ಮೇಲಿನ ಸಂಪೂರ್ಣ ನಿಯಂತ್ರಣಕ್ಕಾಗಿ ಜಿದ್ದಾಜಿದ್ದಿ ನಡೆಸುತ್ತಿವೆ. ಈ ಮನವಿಯನ್ನು ಸುಪ್ರೀಂಕೋರ್ಟ್​​ಗಳು ಸಲ್ಲಿಸಿವೆ ಮತ್ತು ಚುನಾವಣಾ ಆಯೋಗದ ಎದುರೂ ಇಟ್ಟಿವೆ.

ಏಕನಾಥ ಶಿಂಧೆ ಮತ್ತು ಉದ್ಧವ್ ಠಾಕ್ರೆ ಎರಡೂ ಬಣಗಳಿಂದ ಒಟ್ಟೂ ಆರು ಅರ್ಜಿಗಳು ಸುಪ್ರೀಂಕೋರ್ಟ್​​ಗೆ ಸಲ್ಲಿಕೆಯಾಗಿವೆ. ಅದರಲ್ಲಿ ಏಕನಾಥ ಶಿಂಧೆ ಬಣದ್ದು ಒಂದೇ ಅರ್ಜಿ ಮತ್ತು ಇನ್ನುಳಿದ ಐದು ಉದ್ಧವ್ ಠಾಕ್ರೆ ಪಾಳಯದ್ದು. ಈ ಹಿಂದೆ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್​, ಮಹಾರಾಷ್ಟ್ರ ಶಿವಸೇನೆ ರಾಜಕೀಯ ವಿವಾದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿದ್ದಂತೆ ಕಾಣುತ್ತದೆ ಎಂದು ಹೇಳಿತ್ತು. ನಿಜಕ್ಕೂ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕಾ? ಬೇಡವಾ ಎಂಬ ಬಗ್ಗೆ ಆಗಸ್ಟ್​ 8ಕ್ಕೆ ವಿಚಾರಣೆ ನಡೆಸುವುದಾಗಿ ಸಿಜೆಐ ಎನ್​. ವಿ.ರಮಣ ಹೇಳಿದ್ದಾರೆ.

ಇನ್ನೊಂದೆಡೆ ಚುನಾವಣಾ ಆಯೋಗ ಜುಲೈ 23ರಂದು ಎರಡೂ ಬಣಗಳಿಗೆ ನೋಟಿಸ್​ ನೀಡಿ, ‘ನೀವೇ ನಿಜವಾದ ಶಿವಸೇನೆ ಎಂಬುದನ್ನು ಡಾಕ್ಯೂಮೆಂಟರಿ ಮೂಲಕ ದಾಖಲೀಕರಿಸಿ’ ಎಂದು ಸೂಚನೆ ನೀಡಿದೆ. ಹಾಗೇ, ಅದಕ್ಕೂ ಕೂಡ ಆಗಸ್ಟ್​ 8ರ ಡೆಡ್​ಲೈನ್​ ಕೊಟ್ಟಿದೆ. ಅದರ ಮಧ್ಯೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಜೆಐ ಎನ್​.ವಿ.ರಮಣ ನೇತೃತ್ವದ ಪೀಠ, ‘ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಹೀಗಾಗಿ ಏಕನಾಥ್ ಶಿಂಧೆ ಬಣದ ಅರ್ಜಿಯ ಬಗ್ಗೆ ಯಾವುದೇ ನಿರ್ಧಾರವನ್ನೂ ಒಮ್ಮೆಲೇ ತೆಗೆದುಕೊಳ್ಳಬೇಡಿ. ಉದ್ಧವ್ ಠಾಕ್ರೆ ಬಣಕ್ಕೆ ಅವರ ಪ್ರತಿಕ್ರಿಯೆಯನ್ನು ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಕೊಡಬಹುದು’ ಎಂದು ಮೌಖಿಕವಾಗಿ ತಿಳಿಸಿದೆ.

ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರು ಇಂದು ಏಕನಾಥ ಶಿಂಧೆ ಬಣಕ್ಕೆ ಒಂದು ಪ್ರಮುಖ ಪ್ರಶ್ನೆಯನ್ನು ಕೇಳಿದ್ದಾರೆ. ‘ನೀವು ಒಂದು ಪಕ್ಷದಿಂದ ಚುನಾಯಿತರಾದ ಬಳಿಕ ಅದೇ ಪಕ್ಷವನ್ನು ನಿರ್ಲಕ್ಷಿಸಿದರೆ ಪ್ರಜಾಪ್ರಭುತ್ವಕ್ಕೆ ಅಪಾಯ ತಂದಂತೆ ಅಲ್ಲವೇ’ ಎಂದು ಕೇಳಿದ್ದಾರೆ. ಅದಕ್ಕೆ ಶಿಂಧೆ ಬಣದ ಪರ ವಾದ ಮಂಡಿಸುತ್ತಿರುವ ವಕೀಲ ಹರೀಶ್ ಸಾಳ್ವೆ ‘ಇಲ್ಲ’ ಎಂದು ಉತ್ತರಿಸಿದ್ದಾರೆ. ಆಗಸ್ಟ್​ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಇದನ್ನೂ ಓದಿ: ಏಕನಾಥ ಶಿಂಧೆ, ಉದ್ಧವ್‌ ಠಾಕ್ರೆಗೆ ಚುನಾವಣಾ ಆಯೋಗ ನೋಟಿಸ್‌; ಆಗಸ್ಟ್‌ 8 ಡೆಡ್‌ಲೈನ್‌

Exit mobile version