ನವ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೀಗ ಮೂರನೇ ಮಂಕಿಪಾಕ್ಸ್ ಕೇಸ್ ದಾಖಲಾಗಿದೆ. ಇದು ದೇಶದ 8ನೇ ಕೇಸ್ ಆಗಿದೆ. 31ವರ್ಷದ ನೈಜೀರಿಯಾ ಮೂಲದ ವ್ಯಕ್ತಿಯಲ್ಲೀಗ ಮಂಕಿಪಾಕ್ಸ್ ದೃಢಪಟ್ಟಿದ್ದು, ದೆಹಲಿಯ ಲೋಕ್ ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೂ ಕೂಡ ವಿದೇಶ ಪ್ರವಾಸ ಮಾಡಿದವರು ಅಲ್ಲ. ಇಂದು ಕೇರಳದಲ್ಲಿ 30 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇವರು ಯುಎಇಯಿಂದ ಜುಲೈ 27ರಂದು ಕೇರಳಕ್ಕೆ ಆಗಮಿಸಿದ್ದರು.
ಹೆದರಬೇಡಿ..
ಭಾರತದಲ್ಲಿ ಮಂಕಿಪಾಕ್ಸ್ ಕೇಸ್ಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈ ಬಗ್ಗೆ ಮಾತನಾಡಿದ್ದಾರೆ. ‘ಮಂಕಿಪಾಕ್ಸ್ ಎಂಬುದು ಜಗತ್ತಿಗಾಗಲೀ, ಭಾರತಕ್ಕಾಗಲೀ ಹೊಸ ರೋಗವಲ್ಲ. 1970ರಿಂದಲೂ ಆಫ್ರಿಕಾದಲ್ಲಿ ಹಲವು ಪ್ರಕರಣಗಳು ಕಾಣಿಸಿಕೊಂಡಿವೆ. ಮಂಕಿಪಾಕ್ಸ್ ನಿಯಂತ್ರಣಕ್ಕೆ, ಚಿಕಿತ್ಸೆಗೆ ಭಾರತದಲ್ಲೂ ಕೂಡ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ರೋಗ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ವಿಶೇಷ ಗಮನ ಕೊಟ್ಟಿದೆ. ಯಾರೂ ಹೆದರುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
‘ಮಂಕಿಪಾಕ್ಸ್ ಬಗ್ಗೆ ಅನಗತ್ಯ ಭಯ, ಗಾಬರಿ ಬೇಡ. ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ನಾವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನಡೆಸುತ್ತಿದ್ದೇವೆ. ನೀತಿ ಆಯೋಗದ ಸದಸ್ಯರ ನೇತೃತ್ವದಲ್ಲಿ ಕಾರ್ಯಪಡೆಯನ್ನೂ ರಚಿಸಿದ್ದೇವೆ. ಈ ಟಾಸ್ಕ್ಫೋರ್ಸ್ನ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕೇರಳದಲ್ಲಿಯೇ ಅತ್ಯಂತ ಹೆಚ್ಚು ಕೇಸ್ಗಳು ಕಂಡುಬಂದಿವೆ. ರೋಗ ನಿಯಂತ್ರಣ, ಚಿಕಿತ್ಸೆ ಸಂಬಂಧಪಟ್ಟು ಕೇರಳ ರಾಜ್ಯ ಸರ್ಕಾರಕ್ಕೆ ಯಾವುದೇ ಸಹಾಯ ಬೇಕಿದ್ದರೂ ನಾವು ನೀಡುತ್ತೇವೆ ’ ಎಂದು ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ‘ಮಂಕಿಪಾಕ್ಸ್ ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಹೋದವರು ಕಡ್ಡಾಯವಾಗಿ 21ದಿನಗಳ ಕಾಲ ಐಸೋಲೇಟ್ ಆಗಬೇಕು. ಮಾಸ್ಕ್ ಧರಿಸಬೇಕು. ಸ್ವಚ್ಛತೆ ಪಾಲನೆ ಮಾಡಬೇಕು’ ಎಂದೂ ಹೇಳಿತ್ತು. ಈಗಾಗಲೇ 75ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದರಿಂದ ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಹೆಚ್ಚಿನ ಗಮನಹರಿಸಿದೆ.
ಲಸಿಕೆ ಸಂಶೋಧನೆ ನಡೆಯುತ್ತಿದೆ
ಮಂಕಿಪಾಕ್ಸ್ ಭಾರತದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಆಧಾರ್ ಪೂನಾವಾಲಾ ಒಂದು ಸಮಾಧಾನಕರ ಸುದ್ದಿ ಕೊಟ್ಟಿದ್ದಾರೆ. ಮಂಕಿಪಾಕ್ಸ್ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾರನ್ನು ಭೇಟಿ ಮಾಡಿದ ಅವರು ಬಳಿಕ ಮಾತನಾಡಿ, ‘ನಾವು ಲಸಿಕೆ ಅಭಿವೃದ್ಧಿ ಪಡಿಸಲು ಈಗಾಗಲೇ ಸಂಶೋಧನೆ ಪ್ರಾರಂಭಿಸಿದ್ದೇವೆ. ಇದನ್ನು ಆರೋಗ್ಯ ಸಚಿವರಿಗೂ ತಿಳಿಸಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ 7ಕ್ಕೆ ಏರಿಕೆ; ಯುಎಇಯಿಂದ ಕೇರಳಕ್ಕೆ ಬಂದಿದ್ದವನಲ್ಲಿ ಸೋಂಕು