ನವ ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಕಾಂಗ್ರೆಸ್ ನಾಯಕ ರಂಜನ್ ಅಧೀರ್ ಚೌಧರಿ ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದನ್ನು ವಿರೋಧಿಸಿ ಬಿಜೆಪಿ ಇಂದು ಸಂಸತ್ ಕಲಾಪದಲ್ಲಿ ದೊಡ್ಡ ಗಲಾಟೆಯನ್ನೇ ಸೃಷ್ಟಿಸಿದೆ. ಸೋನಿಯಾ ಗಾಂಧಿ ಸೇರಿ ಪಕ್ಷದ ಎಲ್ಲರೂ ಕ್ಷಮೆ ಕೇಳಬೇಕು ಎಂದು ಬಿಜೆಪಿಯ ಸಚಿವರು, ಸಂಸದರು ಆಗ್ರಹಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇಡೀ ಸದನದಲ್ಲಿ ಒಬ್ಬರಾದರೂ ಬಿಜೆಪಿ ಸಂಸದರ ಬಳಿ ಹೋಗಿ ಈ ಬಗ್ಗೆ ಸ್ಪಷ್ಟನೆ ಕೊಡಲು ಪ್ರಯತ್ನಿಸಿದ್ದಾರೆ. ಆದರೆ ಸ್ಮೃತಿ ಇರಾನಿ ಮತ್ತು ಇತರ ಕೆಲವರು ಅಡ್ಡಿಪಡಿಸಿದ್ದಾರೆ. ಸೋನಿಯಾ ಗಾಂಧಿ ಮಾತನಾಡಲೂ ಬಿಡದಷ್ಟು ಕೂಗಾಡಿದ್ದಾರೆ. ಮುಖದ ಬಳಿಯೇ ಹೋಗಿ ಕಾಂಗ್ರೆಸ್ ವಿರೋಧಿ, ಅಧೀರ್ ಚೌಧರಿ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.
ರಾಷ್ಟ್ರಪತ್ನಿ ಎಂಬ ಟೀಕೆಯನ್ನು ಅತ್ಯಂತ ಉಗ್ರರೂಪದಲ್ಲಿ ಖಂಡಿಸಿದ್ದು ಸ್ಮೃತಿ ಇರಾನಿ. ಮೊದಲು ಲೋಕಸಭೆಯಲ್ಲಿ ಈ ವಿಚಾರ ಎತ್ತಿದ್ದು ಕೂಡ ಅವರೇ. ಕಾಂಗ್ರೆಸ್ ಪಕ್ಷದವರು ಆದಿವಾಸಿ ವಿರೋಧಿಗಳು, ಮಹಿಳಾ ವಿರೋಧಿಗಳು ಎಂದು ಬಿಜೆಪಿಯವರು ಕೂಗಾಡಿದ್ದಾರೆ. ಬೆಳಗ್ಗೆ 11ಗಂಟೆಗೆ ಶುರುವಾಗಿ ಕಲಾಪ ಶುರುವಾಗಿ ಕೆಲವೇ ಹೊತ್ತಲ್ಲಿ ಗಲಾಟೆ ಜೋರಾದ ಕಾರಣ ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಆಗ ಸೋನಿಯಾ ಗಾಂಧಿ ಕೂಡ ಅಲ್ಲಿಂದ ತೆರಳಲು ಮುಂದಾದರು. ಆಗ ಬಿಜೆಪಿ ಮಹಿಳಾ ಸಂಸದೆಯರೆಲ್ಲ ಒಟ್ಟಾಗಿ ʼಸೋನಿಯಾ ಗಾಂಧಿ ಕ್ಷಮೆ ಕೇಳಬೇಕುʼ ಎಂದು ಪಟ್ಟು ಹಿಡಿದರು. ಹೀಗಾಗಿ ಸೋನಿಯಾ ಗಾಂಧಿ ಬಿಜೆಪಿ ಹಿರಿಯ ಸಂಸದೆ ರಮಾ ದೇವಿ ಬಳಿ ಮಾತನಾಡಿ, ಸ್ಪಷ್ಟನೆ ಕೊಡಲು ಮುಂದಾದರು. ʼಚೌಧರಿ ಆಡಿದ ಮಾತಿನ ವಿವಾದದಲ್ಲಿ ನನ್ನ ಹೆಸರನ್ನೇಕೆ ತೆಗೆದುಕೊಳ್ಳುತ್ತೀರಿ. ಅಧೀರ್ ಚೌಧರಿ ಕೂಡ ಬಾಯ್ತಪ್ಪಿ ಹೇಳಿದ ಮಾತು ಇದು. ಅದಕ್ಕಾಗಿ ಅವರೂ ಈಗಾಗಲೇ ಕ್ಷಮೆ ಕೇಳಿಯಾಗಿದೆʼ ಎಂದು ಹೇಳಿದರು. ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಸ್ಮೃತಿ ಇರಾನಿ, ʼಸೋನಿಯಾ ಗಾಂಧಿ ಕ್ಷಮೆ ಕೇಳಬೇಕುʼ ಎಂದು ಮತ್ತಷ್ಟು ಜೋರಾಗಿಯೇ ಕೂಗಿದರು. ಅಷ್ಟೇ ಅಲ್ಲ, ʼಮೇಡಂ, ನನ್ನ ಸಹಾಯವೇನಾದರೂ ಬೇಕಾ? ನಾವು ನಿಮ್ಮ ಹೆಸರನ್ನು ತೆಗೆದುಕೊಳ್ಳುತ್ತೇವೆʼ ಎಂದು ವ್ಯಂಗ್ಯ ಮಾಡಿದರು. ಆಗ ಕ್ರೋಧಗೊಂಡ ಸೋನಿಯಾಗಾಂಧಿ. ʼನೀವು ನನ್ನ ಬಳಿ ಮಾತನಾಡಲೇಬೇಡಿʼ ಎಂದು ಸ್ಮೃತಿ ಇರಾನಿಗೆ ಖಾರವಾಗಿಯೇ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ; ಬಿಜೆಪಿ ಆಕ್ರೋಶ