ನವ ದೆಹಲಿ: ವೈದ್ಯರು ತನ್ನ ಪತ್ನಿಗೆ ಚಿಕಿತ್ಸೆ ಕೊಡುವಾಗ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ, ವೈದ್ಯರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈಕೋರ್ಟ್ (Kerala Highcourt) ನಿರಾಕರಿಸಿದೆ. ಎ.ಬದರುದ್ದೀನ್ ಅವರ ಏಕಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು. ‘ಯಾವುದೋ ರೋಗಿ (ಪುರುಷ/ಮಹಿಳೆ)ಯನ್ನು ವೈದ್ಯರು ತಪಾಸಣೆ ವೇಳೆ ಮುಟ್ಟಿದಾಗ ಆ ರೋಗಿ ವೈದ್ಯರು ತನ್ನನ್ನು ಮುಟ್ಟುತ್ತಿದ್ದಾರೆ ಎಂಬ ವಿಷಯಕ್ಕೆ ಕೋಪಗೊಂಡರೆ, ನೊಂದುಕೊಂಡರೆ ಆ ವೈದ್ಯರಿಗೆ ತನ್ನ ವೃತ್ತಿಯನ್ನು ಮುಂದುವರಿಸುವುದೇ ಕಷ್ಟವಾಗುತ್ತದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಹಾಗೇ, ವೈದ್ಯರ ಮೇಲೆ ವ್ಯಕ್ತಿ ಹಲ್ಲೆ ಮಾಡಿದ್ದು ಸರಿಯಲ್ಲ. ಇದೊಂದು ಗಂಭೀರ ಪ್ರಕರಣ ಎಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜನವರಿ 8ರಂದು ಕೇರಳದ ಆಸ್ಪತ್ರೆಯಲ್ಲಿ ಹೀಗೊಂದು ಘಟನೆ ನಡೆದಿತ್ತು. ಸಂಜೆ 8ಗಂಟೆಯ ಹೊತ್ತಿಗೆ ರಸ್ತೆ ಅಪಘಾತಕ್ಕೀಡಾದ 27ವರ್ಷದ ಮಹಿಳೆಯೊಬ್ಬರು ದಾಖಲಾಗಿದ್ದರು. ಅವರನ್ನು ವೈದ್ಯರು ಮುಟ್ಟಿ ತಪಾಸಣೆ ಮಾಡಿದ್ದರು. ಪತ್ನಿಯನ್ನು ವೈದ್ಯರು ಮುಟ್ಟಿದ್ದನ್ನು ನೋಡಿದ, ಆಕೆಯ ಪತಿ ಕೋಪಗೊಂಡು, ವೈದ್ಯರ ಕಾಲರ್ ಹಿಡಿದು ಹೊಡೆದಿದ್ದ. ಆ ವ್ಯಕ್ತಿಯ ವಿರುದ್ಧ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು. ಜಾಮೀನು ಅರ್ಜಿ ಕೋರಿ ಆರೋಪಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ವ್ಯಕ್ತಿಯ ಪರ ವಾದ ಮಂಡಿಸಿದ್ದ ವಕೀಲ ‘ನನ್ನ ಕಕ್ಷಿದಾರರ ಪತ್ನಿಯ ಜತೆ ವೈದ್ಯರು ಅನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಮಹಿಳೆ ಕೂಡ ತಿಳಿಸಿದ್ದಾರೆ’ ಎಂದು ಹೇಳಿದ್ದರು. ಇನ್ನೊಂದೆಡೆ ಪ್ರಾಸಿಕ್ಯೂಟರ್ ಪ್ರತಿವಾದ ಮಾಡಿ, ‘ವೈದ್ಯರ ಮೇಲೆ ಹಲ್ಲೆ ಮಾಡುವುದು ಗಂಭೀರ ಅಪರಾಧ. ಅದರಲ್ಲೂ ಈ ವ್ಯಕ್ತಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಹಾಗಾಗಿ ನಿರೀಕ್ಷಣಾ ಜಾಮೀನು ನೀಡಬಾರದು’ ಎಂದು ಹೇಳಿದ್ದರು.
ಇದನ್ನೂ ಓದಿ: ಚಾಲಕ ಕುಡಿದಿದ್ದರೂ, ಅಪಘಾತದಲ್ಲಿ ಸಂತ್ರಸ್ತರಾದ ಉಳಿದವರಿಗೆ ಪರಿಹಾರ ಕೊಡುವುದು ವಿಮಾ ಕಂಪನಿಗಳ ಹೊಣೆ: ಕೇರಳ ಹೈಕೋರ್ಟ್
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ‘ವೈದ್ಯರು ರೋಗಿಗಳನ್ನು ಸ್ಪರ್ಶಿಸದೆ ಚಿಕಿತ್ಸೆ ನೀಡಲು, ಅವರನ್ನು ತಪಾಸಣೆ ಮಾಡಲು ಸಾಧ್ಯವೇ ಇಲ್ಲ. ತಮಗೆ ಚಿಕಿತ್ಸೆ ಬೇಕು ಎಂದು ಹೋಗುವ ರೋಗಿಗಳು ವೈದ್ಯರು ಮುಟ್ಟುತ್ತಾರೆ ಎಂಬ ಕಾರಣಕ್ಕೆ ಕ್ರೋಧಗೊಳ್ಳುವುದು ಸರಿಯಲ್ಲ. ಹೀಗೆ ಮಾಡಿದರೆ ವೈದ್ಯರು ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ರೋಗಿಯ ಹೃದಯ ಬಡಿತ ಆಲಿಸಬೇಕು ಎಂದರೆ ಎದೆಯ ಎಡಭಾಗದಲ್ಲಿ ಸ್ಟೆತೋಸ್ಕೋಪ್ ಇಡಲೇಬೇಕು. ಅಗತ್ಯವಿದ್ದಲ್ಲಿ ಸ್ಪರ್ಶಿಸಿ, ತಪಾಸಣೆ ಮಾಡಲೇಬೇಕು’ ಎಂದು ಹೇಳಿದ್ದಾರೆ. ‘ಹಾಗಂತ ವೈದ್ಯರು ನಿಜವಾಗಿಯೂ ರೋಗಿಗಳ ಜತೆ ಅಸಭ್ಯವಾಗಿ ವರ್ತಿಸಿದ್ದರೆ, ಮಹಿಳಾ ರೋಗಿಗಳ ಜತೆ ಅನುಚಿತ ವರ್ತನೆ ಮಾಡಿದ್ದರೆ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಆದರೆ ಪ್ರಸ್ತುತ ಪ್ರಕರಣದಲ್ಲಿ ಆರೋಪ ಸುಳ್ಳು ಎಂದು ಸಾಬೀತಾಗಿದೆ’ ಎಂದೂ ತಿಳಿಸಿದ್ದಾರೆ.