ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ, ಜಾರಿ ನಿರ್ದೇಶನಲಾಯದಿಂದ ಬಂಧಿತರಾಗಿರುವ ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ (Tamil Nadu minister V Senthil Balaji) ಅವರಿಗೆ 14 ದಿನಗಳ (ಜೂನ್ 28ರವರೆಗೆ) ನ್ಯಾಯಾಂಗ ಬಂಧನ ವಿಧಿಸಿ ಸೆಷನ್ಸ್ ಕೋರ್ಟ್ ಆದೇಶಿಸಿದೆ. ಆದರೆ ಸೆಂಥಿಲ್ ಬಾಲಾಜಿ ಆರೋಗ್ಯ ಹದಗೆಟ್ಟಿದ್ದು, ಅವರಿಗೆ ತಕ್ಷಣವೇ ಬೈಪಾಸ್ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‘
ನಾಯಕ ವಿ.ಸೆಂಥಿಲ್ ಬಾಲಾಜಿ ಈ ಮೊದಲು ಎಐಎಡಿಎಂಕೆ ಪಕ್ಷದಲ್ಲಿದ್ದರು. ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ, 2011ರಿಂದ 2015ರವರೆಗೆ ಸಾರಿಗೆ ಸಚಿವರೂ ಆಗಿದ್ದರು. ಹೀಗೆ ಸಾರಿಗೆ ಸಚಿವರಾಗಿರುವ ಸಮಯದಲ್ಲಿ, ಜನರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದಿದ್ದಾರೆ. ಇಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕೇಸ್ಗೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿ.ಸೆಂಥಿಲ್ ಬಾಲಾಜಿ ವಿರುದ್ಧದ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ, ಸೆಂಥಿಲ್ ವಿರುದ್ಧ ತನಿಖೆಗೆ ಕೇಂದ್ರೀಯ ತನಿಖಾ ದಳಗಳಿಗೆ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಇಡಿ ಕೂಡ ಕೇಸ್ ದಾಖಲಿಸಿಕೊಂಡಿತ್ತು.
ಮಂಗಳವಾರ ವಿ. ಸೆಂಥಿಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಇ.ಡಿ. ಇಂದು ಮುಂಜಾನೆ ಅವರನ್ನು ಬಂಧಿಸಿದ್ದಾರೆ. ಆದರೆ ಆ ಕ್ಷಣವೇ ಸೆಂಥಿಲ್ಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ, ವಾಹನದಲ್ಲಿ ಮಲಗಿದ್ದ ಸೆಂಥಿಲ್ ಜೋರಾಗಿ ಅಳುತ್ತಿದ್ದರು. ಅವರ ಬೆಂಬಲಿಗರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದರು. ದೊಡ್ಡ ಹೈಡ್ರಾಮಾವೇ ನಡೆದಿತ್ತು. ಇಷ್ಟೆಲ್ಲದರ ಮಧ್ಯೆ ಸೆಂಥಿಲ್ ಅವರ ಪತ್ನಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಕೂಡಲೇ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ಹೈಕೋರ್ಟ್ ಕೂಡ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: Video: ತಮಿಳುನಾಡು ಅಬಕಾರಿ ಸಚಿವ ಅರೆಸ್ಟ್; ನೋವು ತಡೆಯಲಾಗದು ಎಂದು ಆಸ್ಪತ್ರೆ ಬಳಿ ಜೋರಾಗಿ ಅಳು
ಈ ಹಿಂದೆ ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಅವರನ್ನು ಉಚ್ಚಾಟನೆ ಮಾಡಿದ್ದಾಗ ಒಟ್ಟು 18 ಶಾಸಕರು ದಿನಕರನ್ಗೆ ಬೆಂಬಲ ನೀಡಿದ್ದರು. ಹೀಗಾಗಿ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರಲ್ಲಿ ಈ ವಿ.ಸೆಂಥಿಲ್ ಕೂಡ ಒಬ್ಬರು. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಟಿಟಿವಿ ದಿನಕರನ್ಗೆ ಬೆಂಬಲ ನೀಡಿದ್ದಕ್ಕೆ ಸೆಂಥಿಲ್ರನ್ನು ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ಅದಾದ ಮೇಲೆ 2018ರಲ್ಲಿ ಅವರು ಡಿಎಂಕೆಯನ್ನು ಸೇರ್ಪಡೆಯಾಗಿದ್ದರು. ಇದೀಗ ಡಿಎಂಕೆ ಪಕ್ಷದ ನಾಯಕ, ತಮಿಳು ನಾಡು ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ಇತರ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
.