Site icon Vistara News

Mann Ki Baat: ಮೋದಿಯವರ ಮನ್​ ಕೀ ಬಾತ್​ ಒಂದು ಎಪಿಸೋಡ್​ಗೆ 8.3 ಕೋಟಿ ರೂ.ವೆಚ್ಚ?; ವೈರಲ್​ ಸಂದೇಶ ನಿಜವೇ?

Does Mann Ki Baat Cost Rs over Core Per Episode PIB Fact Check report here

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Modi) ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕೀ ಬಾತ್ (Mann Ki Baat)​ ಏಪ್ರಿಲ್ 30ರಂದು 100ನೇ ಸಂಚಿಕೆ ಪೂರೈಸಿತು. ಈ 100ನೇ ಆವೃತ್ತಿ ಪ್ರಸಾರವಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳ ತುಂಬೆಲ್ಲ ಒಂದು ಸಂದೇಶ ವೈರಲ್ ಆಗುತ್ತಿದೆ. ‘ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್ (Mann Ki Baat 100)​​ನ ಒಂದು ಎಪಿಸೋಡ್​​ಗೆ 8.3 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಇದುವರೆಗಿನ ಮನ್​ ಕೀ ಬಾತ್​ನ ಎಲ್ಲ ಎಪಿಸೋಡ್​ಗಳಿಗೆ ಸೇರಿ ಒಟ್ಟು ಖರ್ಚಾಗಿದ್ದು 830 ಕೋಟಿ ರೂಪಾಯಿ’ ಎಂಬುದು ಆ ಸಂದೇಶ. ಅದೆಷ್ಟೋ ಜನ ಈ ಮೆಸೇಜ್​​ನ್ನು ಶೇರ್ ಮಾಡಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಆದರೆ ಇದು ತಪ್ಪು ಮಾಹಿತಿ ಎಂಬುದನ್ನು ಕೇಂದ್ರ ಸರ್ಕಾರದ ನೋಡೆಲ್​ ಏಜೆನ್ಸಿಯಾಗಿರುವ ಪ್ರೆಸ್​ ಇನ್​ಫಾರ್ಮೇಶನ್​ ಬ್ಯೂರೊ (PIB-ಪಿಐಬಿ) ಸ್ಪಷ್ಟಪಡಿಸಿದೆ. ಪಿಐಬಿಯ ಸತ್ಯಶೋಧನಾ ವಿಭಾಗವು ವೈರಲ್ ಮೆಸೇಜ್​ ಬಗ್ಗೆ ಫ್ಯಾಕ್ಟ್​ಚೆಕ್​ ನಡೆಸಿದೆ. ಮನ್​ ಕೀ ಬಾತ್​ ಶುರುವಾದಾಗಿನಿಂದ ಇಲ್ಲಿಯವರೆಗೆ ಜಾಹೀರಾತಿಗಾಗಿ 8.3 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಒಂದು ಎಪಿಸೋಡ್​​ಗಾಗಿ ಎಂದಿಗೂ 8.3 ಕೋಟಿ ರೂ.ವೆಚ್ಚವಾಗಿಲ್ಲ. ಇದುವರೆಗೆ 830 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ವೈರಲ್ ಆಗುತ್ತಿರುವ ಸಂದೇಶ ತಪ್ಪು ಮಾಹಿತಿ ಒಳಗೊಂಡಿದೆ. ಯಾರೂ ನಂಬಬೇಡಿ ಎಂದು ಹೇಳಿದೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ 2014ರ ಅಕ್ಟೋಬರ್​​ನಲ್ಲಿ ಮನ್​ ಕೀ ಬಾತ್​ ರೇಡಿಯೊ ಕಾರ್ಯಕ್ರಮ ಪ್ರಾರಂಭಿಸಿದರು. ರಾಜಕೀಯೇತರ ವಿಷಯಗಳನ್ನು ಮಾತ್ರ ಮಾತಾಡುವ ಮೂಲಕ ಜನರೊಂದಿಗೆ ಸಂಪರ್ಕ ಬೆಸೆದುಕೊಂಡರು. ಇದುವರೆಗೂ ಅವರು ಒಮ್ಮೆಯೂ ಮನ್​ ಕೀ ಬಾತ್​ ತಪ್ಪಿಸಿದ್ದೇ ಇಲ್ಲ. ಏಪ್ರಿಲ್​ 30ರಂದು ಪ್ರಸಾರವಾದ 100ನೇ ಆವೃತ್ತಿಯನ್ನು ಕೇಂದ್ರ ಸರ್ಕಾರ ವಿಶೇಷವಾಗಿಸಿದೆ. ಈ ಸಂಚಿಕೆ ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲೂ ನೇರಪ್ರಸಾರಗೊಂಡಿದೆ.

ಪ್ರತಿಬಾರಿಯೂ ಮನ್​ ಕೀ ಬಾತ್​​ ಕಾರ್ಯಕ್ರಮವನ್ನು ಭಾರತದ ಎಲ್ಲ ಸ್ಥಳೀಯ ಭಾಷೆಗಳಿಗೂ ಭಾಷಾಂತರ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈ ಸಲ ವಿದೇಶಿ ಭಾಷೆಗಳಿಗೂ ಭಾಷಾಂತರಗೊಂಡಿದೆ. ನರೇಂದ್ರ ಮೋದಿಯವರು ಹಿಂದಿಯಲ್ಲಿ ಮಾತನಾಡಿದ್ದನ್ನು, ಫ್ರೆಂಚ್​, ಚೈನೀಸ್​, ಇಂಡೋನೇಷ್ಯಾ, ಟಿಬೆಟಿಯನ್​, ಬರ್ಮೀಸ್​, ಬಲುಚಿ, ಅರೇಬಿಕ್, ಪಷ್ಟು, ದಾರಿ ಮತ್ತು ಸ್ವಾಹಿಲಿ ಭಾಷೆಗಳಿಗೆ ಭಾಷಾಂತರಗೊಂಡು ಪ್ರಸಾರವಾಗಿದೆ.

ಇದನ್ನೂ ಓದಿ: Mann Ki Baat: ಪ್ರಧಾನಿ ಮೋದಿಯವರ ಮಾರ್ಗದರ್ಶಕ ಯಾರು?; ಮನ್​ ಕೀ ಬಾತ್​​ನಲ್ಲಿ ಸ್ಮರಣೆ

Exit mobile version