ಭೋಪಾಲ್: ಮಧ್ಯಪ್ರದೇಶದ ಜಬಲ್ಪುರದ ಶಹಪುರ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳ ಹಾಸಿಗೆ ಮೇಲೆ ನಾಯಿಗಳು ಮಲಗಿರುವ ವಿಡಿಯೊ ವೈರಲ್ ಆಗುತ್ತಿದೆ. ಆ ಆಸ್ಪತ್ರೆ ಅತ್ಯಂತ ಗಲೀಜಾಗಿದ್ದು, ಬೆಡ್ಗಳೆಲ್ಲ ಬೇಕಾಬಿಟ್ಟಿ ಇವೆ. ಆಪರೇಶನ್ ಥಿಯೇಟರ್ ಬಳಿಯೂ ಅನೈರ್ಮಲ್ಯತೆ ತಾಂಡವ ಆಡುತ್ತಿದೆ. ಅಸ್ತವ್ಯಸ್ತವಾದ ಬೆಡ್ ಮೇಲೆ ಬೀದಿ ನಾಯಿಗಳು ಆರಾಮಾಗಿ ಮಲಗಿವೆ.
ಸಿದ್ಧಾರ್ಥ್ ಜೈನ್ ಎಂಬುವರು ತಮ್ಮ ಗರ್ಭಿಣಿ ಪತ್ನಿಯ ವೈದ್ಯಕೀಯ ತಪಾಸಣೆಗಾಗಿ ಶಹಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಹೋದ ಅವರಿಗೆ ಆಸ್ಪತ್ರೆಯ ಗಲೀಜು, ಅವ್ಯವಸ್ಥೆ-ನಾಯಿಗಳು ಮಲಗಿರುವ ದೃಶ್ಯ ಕಂಡು, ಎರಡು ವಿಡಿಯೊ ಮಾಡಿದ್ದಾರೆ, ತಾನು ಅಕ್ಷರಶಃ ಕಂಗಾಲಾದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಒಬ್ಬೇ ಒಬ್ಬ ವೈದ್ಯನೂ ಇರಲಿಲ್ಲ. ಒಬ್ಬರು ನರ್ಸ್ ಕರ್ತವ್ಯದಲ್ಲಿದ್ದುದು ಬಿಟ್ಟರೆ, ಇನ್ನೊಬ್ಬರ ಸುಳಿವು ಇರಲಿಲ್ಲ. ರೋಗಿಗಳೂ ಯಾರೂ ಇರಲಿಲ್ಲ. ಸೆಕ್ಯೂರಿಟಿ ಗಾರ್ಡ್ ಕೂಡ ಪತ್ತೆಯಿಲ್ಲ ಎಂದು ಹೇಳಲಾಗಿದೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಬಲ್ಪುರ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಮಿಶ್ರಾ, ‘ಆಸ್ಪತ್ರೆ ದುರವಸ್ಥೆ ಬಗ್ಗೆ 24 ಗಂಟೆಯೊಳಗೆ ಉತ್ತರಿಸಲು ಗಡುವು ನೀಡಿ, ಬ್ಲಾಕ್ ವೈದ್ಯಾಧಿಕಾರಿ ಡಾ. ಸಿ.ಕೆ. ಅಟ್ರಾಲಿಯಾ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಜಬಲ್ಪುರದಲ್ಲಿ ಎರಡು ಆರೋಗ್ಯ ಕೇಂದ್ರಗಳಿದ್ದು, ಅವುಗಳ ನಿರ್ವಹಣೆ, ಸ್ವಚ್ಛತೆ ಬಗ್ಗೆ ಬ್ಲಾಕ್ ವೈದ್ಯಾಧಿಕಾರಿ ಗಮನಕೊಡಬೇಕು. ಆದರೆ ಶಹಪುರದ ಆರೋಗ್ಯ ಕೇಂದ್ರದಲ್ಲಿ ಇಷ್ಟು ಅನೈರ್ಮಲ್ಯತೆ, ಅವ್ಯವಸ್ಥೆ ಇದೆ ಎಂದರೆ, ಬ್ಲಾಕ್ ಮೆಡಿಕಲ್ ಅಧಿಕಾರಿ ಸರಿಯಾಗಿ ಕೆಲಸ ನಿರ್ವಹಣೆ ಮಾಡಲಿಲ್ಲ ಎಂದೇ ಅರ್ಥ. ಡಾ. ಸಿ.ಕೆ. ಅಟ್ರಾಲಿಯಾ ಅವರ ಉತ್ತರ ಪರಿಶೀಲನೆ ಮಾಡುತ್ತೇವೆ. ಕೊಟ್ಟ ಉತ್ತರ ತೃಪ್ತಿದಾಯಕ ಆಗಿರದೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಜನವರಿ ತಿಂಗಳಲ್ಲೂ ಇಂಥದ್ದೇ ಪ್ರಕರಣ ಮಧ್ಯಪ್ರದೇಶದಿಂದ ಬೆಳಕಿಗೆ ಬಂದಿತ್ತು. ಗ್ವಾಲಿಯರ್ನ ಕಮಲಾರಾಜಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿಯೊಂದು ಬೆಡ್ ಮೇಲೆ ಮಲಗಿ ನಿದ್ರಿಸುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಮಧ್ಯಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವಹಿಸಲಾಗುತ್ತಿರುವ ನಿರ್ಲಕ್ಷ್ಯಕ್ಕೆ ಇವು ಕೈಗನ್ನಡಿ ಎಂಬಂತಾಗಿದೆ.