Site icon Vistara News

Bilkis Bano Case | ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ನ್ಯಾಯಾಂಗವನ್ನು ದೂರದಿರಿ ಎಂದ ಜಸ್ಟಿಸ್ ಮೃದುಲಾ

Bilkis Bano Case

ಮುಂಬೈ: ಬಿಲ್ಕಿಸ್‌ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಅಪರಾಧಿಗಳನ್ನು ಗುಜರಾತ್‌ ಸರಕಾರ ಬಿಡುಗಡೆ ಮಾಡಿರುವುದಕ್ಕೆ ಸಾರ್ವಜನಿಕರು ನ್ಯಾಯಾಂಗ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಅತ್ಯಾಚಾರಿಗಳಿಗೆ ವಿಧಿಸಿದ ಶಿಕ್ಷೆಯನ್ನು ಎತ್ತಿಹಿಡಿದ ಪೀಠದ ಸದಸ್ಯೆಯಾಗಿದ್ದ, ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೃದುಲಾ ಭಟ್ಕರ್‌ (Justice Mridula Bhatkar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸರಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನ್ಯಾಯಾಂಗವನ್ನು ದೂಷಿಸದಿರಿ” ಎಂದಿದ್ದಾರೆ.

“ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಜನರು ನ್ಯಾಯಾಂಗವನ್ನು ಏಕೆ ದೂಷಿಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಸೆಷನ್ಸ್‌ ನ್ಯಾಯಾಲಯದಿಂದ ಹಿಡಿದು, ಸುಪ್ರೀಂ ಕೋರ್ಟ್‌ವರೆಗೆ ನ್ಯಾಯಾಲಯಗಳು ಜನರಿಗೆ ನ್ಯಾಯವನ್ನೇ ನೀಡುತ್ತಿವೆ. ಹೀಗಿದ್ದರೂ ಜನ ನ್ಯಾಯಾಂಗವನ್ನು ದೂರುತ್ತಿದ್ದಾರೆ. ಸರಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನ್ಯಾಯಾಲಯಗಳು ಹೇಗೆ ಹೊಣೆಯಾಗುತ್ತವೆ” ಎಂದು ಪ್ರಶ್ನಿಸಿದ್ದಾರೆ.

೨೦೦೨ರ ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ ಮೇಲೆ ಅತ್ಯಾಚಾರಗೈದವರನ್ನು ಕಳೆದ ಆಗಸ್ಟ್‌ ೧೫ರಂದು ಗುಜರಾತ್‌ ಸರಕಾರವು ಬಿಡುಗಡೆ ಮಾಡಿದೆ. ೧೧ ಅತ್ಯಾಚಾರಿಗಳಿಗೆ ಅಧೀನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ೨೦೧೬ರಲ್ಲಿ ನಿತ್ಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಇದೇ ನ್ಯಾಯಪೀಠದಲ್ಲಿ ಜಸ್ಟಿಸ್‌ಗಳಾದ ವಿಜಯಾ ತಾಹಿಲ್‌ರಮಣಿ ಹಾಗೂ ಮೃದುಲಾ ಭಟ್ಕರ್‌ ಇದ್ದರು. ೨೦೧೭ರಲ್ಲಿ ಇದೇ ನ್ಯಾಯಪೀಠವು ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯವು ಅರ್ಜಿಯನ್ನು ನಿರಾಕರಿಸಿತ್ತು.

ಇದನ್ನೂ ಓದಿ | Bilkis Bano Case | ಅತ್ಯಾಚಾರ ಆರೋಪಿಗಳೆಲ್ಲ ಬ್ರಾಹ್ಮಣರು, ಒಳ್ಳೇ ಸಂಸ್ಕಾರವಿದೆ ಎಂದ ಬಿಜೆಪಿ ಶಾಸಕ !

Exit mobile version