ಹೈದರಾಬಾದ್: ತೆಲಂಗಾಣದಲ್ಲಿ ಸಾವಿರಾರು ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ (Modi In Telangana), ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸದಿರಿ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಮನವಿ ಮಾಡಿದ್ದಾರೆ. ತೆಲಂಗಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ, ಬೀಬಿನಗರದ ಏಮ್ಸ್‌ಗೆ ಶಂಕುಸ್ಥಾಪನೆ ಸೇರಿ 11 ಸಾವಿರ ಕೋಟಿ ರೂ.ಗಿಂತ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಅವರು ಕೆಸಿಆರ್‌ಗೆ ಮನವಿ ಮಾಡಿದರು.
ಹೈದರಾಬಾದ್‌ನಲ್ಲಿ ರ‍್ಯಾಲಿ ನಡೆಸಿದ ಮೋದಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ತೆಲಂಗಾಣದ ಜನರ ಏಳಿಗೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿರುವುದು, ಉದ್ದೇಶಪೂರ್ವಕವಾಗಿ ಯೋಜನೆಗಳ ಜಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ನನಗೆ ಬೇಸರವಾಗಿದೆ. ಹಾಗಾಗಿ, ರಾಜ್ಯದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತರುವ ಯೋಜನೆಗಳಿಗೆ ಅಡ್ಡಿಪಡಿಸಬಾರದು ಎಂಬುದಾಗಿ ಮನವಿ ಮಾಡುತ್ತೇನೆ” ಎಂದರು.
ತೆಲಂಗಾಣದಲ್ಲಿ ಮೋದಿ ಮಾತು
ಮೋದಿಯ ಸ್ವಾಗತಿಸಲು ತೆರಳದ ಕೆಸಿಆರ್
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಹೋದರೆ, ಶಿಷ್ಟಾಚಾರದಂತೆ ಅವರನ್ನು ಆಹ್ವಾನಿಸಲು ವಿಮಾನ ನಿಲ್ದಾಣಕ್ಕೆ ಹೋಗುವುದರಿಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮತ್ತೆ ತಪ್ಪಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕೆಸಿಆರ್ ಈ ಬಾರಿಯೂ ಗೈರಾದರು. ಹಾಗೆಯೇ, ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಕೆ.ಚಂದ್ರಶೇಖರ ರಾವ್ ಅವರಿಗೆ ಪ್ರಧಾನಮಂತ್ರಿ ಕಚೇರಿಯಿಂದ ಆಹ್ವಾನ ನೀಡಲಾಗಿತ್ತು. ಹಾಗಿದ್ದರೂ, ಕೆಸಿಆರ್ ಅವರು ಕಾರ್ಯಕ್ರಮಗಳಿಗೂ ಗೈರಾದರು.
ವೈರಲ್ ಆಯ್ತು ಪೋಸ್ಟರ್
ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಕೆಸಿಆರ್ ಅವರ ಸರ್ಕಾರವನ್ನು ಟೀಕಿಸುವ ಪೋಸ್ಟರ್ ಒಂದು ವೈರಲ್ ಆಗಿದೆ. ಕೆಸಿಆರ್ ಹಾಗೂ ಅವರ ಪಕ್ಷ ಭಾರತ್ ರಾಷ್ಟ್ರ ಸಮಿತಿಯನ್ನು ಟೀಕಿಸುವ ದಿಸೆಯಲ್ಲಿ ಪೋಸ್ಟರ್‌ಅನ್ನು ರಚಿಸಿದ್ದು, ಅದು ವೈರಲ್ ಆಗಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಜೈಲಿನಿಂದ ಹೊರಗೆ ಬಂದರು. ಮೋದಿ ಅವರು ತೆಲಂಗಾಣಕ್ಕೆ ಬರುತ್ತಿದ್ದಾರೆ. ಕೆಸಿಆರ್ ಅವರು ಪರಾರಿಯಾಗಿದ್ದಾರೆ. ಕೆ. ಕವಿತಾ ಅವರು ಜೈಲಿಗೆ ಹೋಗಲು ಸಿದ್ಧರಾಗಿದ್ದಾರೆ ಎಂದು ಬರೆಯಲಾದ ಪೋಸ್ಟರ್ ಕಾಣಿಸಿಕೊಂಡಿದೆ.