ನವ ದೆಹಲಿ: ಖಲಿಸ್ತಾನಿ ನಾಯಕ, ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ (Amritpal Singh) ಏಪ್ರಿಲ್ 23ರಂದು ಮುಂಜಾನೆ ಸಮಯದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೊಗಾ ಜಿಲ್ಲೆಯ ರೊಡೆ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ಅಡಗಿದ್ದ ಅಮೃತ್ಪಾಲ್ನನ್ನು ಏಪ್ರಿಲ್ 22ರ ರಾತ್ರಿಯಿಂದ ಪೊಲೀಸರು ಲಾಕ್ ಮಾಡಿದ್ದರು. ಗುರುದ್ವಾರದಲ್ಲಿದ್ದ ಆತ ಎಲ್ಲಿಯೂ ತಪ್ಪಿಸಿಕೊಂಡು ಹೋಗದಂತೆ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿದ್ದರು. ಕೊನೆಗೂ ಅವರ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಮೃತ್ಪಾಲ್ ಸಿಂಗ್ ಗುರುದ್ವಾರದಿಂದ ಹೊರಬಂದು, ಪೊಲೀಸರ ಎದುರು ಶರಣಾಗಿದ್ದಾನೆ.
ಪೊಲೀಸರು ಮನಸು ಮಾಡಿದ್ದರೆ, ಅಮೃತ್ಪಾಲ್ ಸಿಂಗ್ನನ್ನು ಇನ್ನಷ್ಟು ಬೇಗ ಸೆರೆ ಹಿಡಿಯಬಹುದಿತ್ತು. ಆತ ಗುರುದ್ವಾರದಿಂದ ಹೊರಬರುವವರೆಗೂ ಕಾಯಬೇಕು ಎಂದೂ ಇರಲಿಲ್ಲ. ಹಳ್ಳಿ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿ, ಗುರುದ್ವಾರದೊಳಗೆ ಹೋಗಿ, ಗನ್ ತೋರಿಸಿ ಎಳೆದುಕೊಂಡು ಬರಬಹುದಿತ್ತು. ಆದರೆ ಪೊಲೀಸರು ಹಾಗೆ ಮಾಡಲೇ ಇಲ್ಲ. ಕಾರಣ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಂದ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ಇತ್ತಂತೆ. ಯಾವ ಕಾರಣಕೂ ಗುರುದ್ವಾರದ ಪಾವಿತ್ರ್ಯತೆಗೆ ಧಕ್ಕೆ ಬರಬಾರದು. ಗುರುದ್ವಾರದ ಆವರಣಕ್ಕೆ ಪೊಲೀಸರು ಕಾಲು ಇಡಬಾರದು. ಅಲ್ಲಿ ಗುಂಡಿನ ಶಬ್ದ ಮೊಳಗಬಾರದು ಎಂದು ಭಗವಂತ್ ಮಾನ್ ರಾತ್ರೋರಾತ್ರಿ, ಕಾರ್ಯಾಚರಣೆಯಲ್ಲಿರುವ ಪೊಲೀಸರಿಗೆ ಕರೆ ಮಾಡಿ ಸೂಚನೆ ನೀಡಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: Amritpal Singh: ‘ಅಮೃತ್ಪಾಲ್ ಸಿಂಗ್ ಶರಣಾಗಿಲ್ಲ’; ಕಾರ್ಯಾಚರಣೆಯ ಸಂಪೂರ್ಣ ವಿವರ ಬಿಚ್ಚಿಟ್ಟ ಪಂಜಾಬ್ ಪೊಲೀಸ್
ಅಮೃತ್ಪಾಲ್ ಸಿಂಗ್ನ ಕೇಸ್ಗೆ ಸಂಬಂಧಪಟ್ಟಂತೆ ಪಿನ್ ಟು ಪಿನ್ ಮಾಹಿತಿಯನ್ನೂ ಸಿಎಂ ಭಗವಂತ್ ಮಾನ್ಗೆ ರವಾನೆ ಮಾಡಲಾಗುತ್ತಿತ್ತು. ಹಾಗೇ, ಈತ ರೊಡೆಯ ಗುರುದ್ವಾರದಲ್ಲಿ ಅಡಗಿರುವ ಬಗ್ಗೆಯೂ ಭಗವಂತ್ ಮಾನ್ಗೆ ಮಾಹಿತಿ ಕೊಟ್ಟಾಗ ಅವರು ಮೊದಲನೇದಾಗಿ ಗುರುದ್ವಾರದ ಒಳ ಹೋಗಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ. ಅಷ್ಟೇ ಅಲ್ಲ, ಏಕಾಏಕಿ ಆ ಹಳ್ಳಿಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಹೋಗಿ, ಸುತ್ತುವರಿದರೆ ಸ್ಥಳೀಯರಿಗೂ ಕಿರಿಕಿಯಾಗುತ್ತದೆ. ಜನರು ಪ್ರತಿಭಟನೆಯನ್ನು ಮಾಡಬಹುದು. ಹಾಗಾಗಿ ಅಲ್ಲಿಗೆ ಪೊಲೀಸ್ ಸಿಬ್ಬಂದಿ ಸಿವಿಲ್ ಡ್ರೆಸ್ನಲ್ಲಿ ತೆರಳಲಿ ಎಂದು ಕೂಡ ಡಿಜಿಪಿಗೆ ಸಿಎಂ ಮಾನ್ ಹೇಳಿದ್ದಾಗಿ ಮಾಧ್ಯಮದಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯ ಅಮೃತ್ಪಾಲ್ ಸಿಂಗ್ನನ್ನು ದಿಬ್ರುಗಢ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.